ಕಲಬುರಗಿ: ಕೇಂದ್ರ ಸರ್ಕಾರ 2025ನೇ ಸಾಲಿಗೆ ಮಂಡಿಸುವ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಆದ್ಯತೆ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಆಗ್ರಹಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ, ‘ಕಳೆದ 11 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶವನ್ನು ನಿರ್ಲಕ್ಷಿಸಿದೆ.
ಇದನ್ನು ಸಮಿತಿ ಬಲವಾಗಿ ಖಂಡಿಸುತ್ತದೆ. ಫೆ.1ರ ಬಜೆಟ್‌ನಲ್ಲಿ ನಮ್ಮ ಪ್ರದೇಶವನ್ನು ಮತ್ತೆ ನಿರ್ಲಕ್ಷಿಸಿದರೆ ಸಮಿತಿ ಈಗಾಗಲೇ ನಿರ್ಣಯ ಕೈಗೊಂಡಿರುವಂತೆ ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಜಾಗೃತಿ ಅಭಿಯಾನ ನಡೆಸುವ ಮೂಲಕ ನಿರಂತರ ಹೋರಾಟಗಳನ್ನು ಹಮ್ಮಿಕೊಳ್ಳುತ್ತದೆ’ ಎಂದರು.
ಸಂಸದ ರಾಧಾಕೃಷ್ಣ ದೊಡ್ಡಮನಿಯವರ ಮುಖಾಂತರ ಈಗಾಗಲೇ ಕೇಂದ್ರ ಸರ್ಕಾರಕ್ಕೆ, ನನೆಗುದಿಗೆ ಬಿದ್ದಿರುವ ಬೀದರ-ಬಳ್ಳಾರಿ ಚತುಷ್ಪಥ ರಸ್ತೆ ಕಾಮಗಾರಿ, ಕಲ್ಯಾಣ ಕರ್ನಾಟಕದಲ್ಲಿ ಹೆದ್ದಾರಿಗಳ ಕಾಮಗಾರಿ, ಕಲಬುರಗಿ ಎರಡನೇ ವರ್ತುಲ ರಸ್ತೆಗೆ ಹಣ ಮಂಜೂರು, ಕಲಬುರಗಿಯಿಂದ ಪ್ರಮುಖ ನಗರಗಳಿಗೆ ವಿಮಾನ ಸೇವೆ, ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಆರಂಭ, ಬೆಂಗಳೂರಿಗೆ ಕಲ್ಯಾಣ ಕರ್ನಾಟಕ ಎಕ್ಸ್‌ಪ್ರೆಸ್ ಹೊಸ ರೈಲು ಸೇರಿದಂತೆ 13 ಬೇಡಿಕೆಗಳ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿ ಗೌರವ ಅಧ್ಯಕ್ಷ ಬಸವರಾಜ ದೇಶಮುಖ, ವಿಶ್ರಾಂತ ಕುಲಪತಿ ಪ್ರೊ. ಪ್ರತಾಪಸಿಂಗ್ ತಿವಾರಿ, ಪ್ರೊ. ಆರ್.ಕೆ.ಹುಡಗಿ, ಪ್ರೊ. ಬಸವರಾಜ ಕುಮನೂರ, ಮಾಜಿದ್ ದಾಗಿ, ಬಸವರಾಜ ಗುಲಸೆಟ್ಟಿ, ಎಂ.ಬಿ.ನಿಂಗಪ್ಪ, ಶಿವಲಿಂಗಪ್ಪ ಭಂಡಕ್, ಅಸ್ಲಂ ಚೌಂಗೆ ಹಾಜರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

