ಕಾಪು: ಕಳೆದ ಹದಿಮೂರು ವರ್ಷಗಳಿಂದ ಉಡುಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಿಹಾರ ಮೂಲದ ಮನೋಜ್ ಕುಮಾರ್ (41) ನನ್ನು ಕಾಪು ಪೊಲೀಸರು ಬಂಧಿಸಿ, ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಕಳ ಉಡುಪಿ ವಿಭಾಗದ ಪೊಲೀಸ್ ಉಪಾಧೀಕ್ಷಕರು ಮತ್ತು ಕಾಪು ಪೊಲೀಸ್ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಕಾಪು ಪೊಲೀಸ್ ಠಾಣಾ ಉಪನಿರೀಕ್ಷಕರಾದ ತೇಜಸ್ವಿ ಟಿ .ಐ. ಮತ್ತು ಶುಭಕರ್ ನೇತೃತ್ವದಲ್ಲಿ ಎಚ್.ಸಿ. ಮೊಹಮ್ಮದ್ ರಫೀಕ್, ಪಿಸಿಗಳಾದ ಗಣೇಶ್ ಮತ್ತು ಗಂಗಾಧರ್ ಅವರು ಬೆಂಗಳೂರಿನ ಯಲಹಂಕದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತನನ್ನು ಎ. 16ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು 6 ತಿಂಗಳ ಸಜಾ ವಿಧಿಸಿದ್ದು ನ್ಯಾಯಾಂಗ ಬಂಧನದೊಂದಿಗೆ ಪೊಲೀಸರು ಉಡುಪಿ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ. ಆರೋಪಿ ಮನೋಜ್ ಕುಮಾರ್ ಲಾರಿ ಚಾಲಕನಾಗಿದ್ದು 2012ರಲ್ಲಿ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಉದ್ಯಾವರದಲ್ಲಿ ವ್ಯಕ್ತಿಯ ಸಾವಿಗೆ ಕಾರಣನಾಗಿದ್ದು ನ್ಯಾಯಾಲಯ ಆತನಿಗೆ 6 ತಿಂಗಳ ಶಿಕ್ಷೆ ವಿಧಿಸಿತ್ತು. ಶಿಕ್ಷೆ ಪ್ರಕಟಗೊಂಡ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದನು.
bigtvnews | Hubli Dharwad News | Kannada News | Karnataka News Hubli News | News In Hubli | Local news

