ಗುತ್ತಿಗೆ ಆಧಾರದ ಪೌರಕಾರ್ಮಿಕರನ್ನು ಪ್ರಸ್ತುತ ಖಾಯಂ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಸುಮಾರು 9,000 ಸಂಖ್ಯೆಯಷ್ಟಿರಬಹುದಾದ ತ್ಯಾಜ್ಯ ವಿಲೇವಾರಿ ವಾಹನ ಚಾಲಕರು, ಸಹಾಯಕರು ಹಾಗೂ ಆಪರೇಟರ್ಸ್ ಗಳನ್ನೂ ಕೂಡ ಖಾಯಂ ಮಾಡಲಾಗುವುದು. ಶುಚಿತ್ವದ ಕಾಯಕದಲ್ಲಿ ತೊಡಗಿರುವವರನ್ನು ಖಾಯಂ ನೇಮಕಾತಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಪೌರಕಾರ್ಮಿಕರ ಸೇವೆ ಕಾಯಂ ನಮ್ಮ ಪ್ರಣಾಳಿಕೆಯಲ್ಲಿ ಇತ್ತು. ನಾವು ಭರವಸೆಯನ್ನು ಈಡೇರಿಸಿದ್ದೇವೆ. ಒಂದು ರೂಪಾಯಿ ಲಂಚ ಪಡೆಯದೇ 12,692 ಪೌರ ಕಾರ್ಮಿಕರಿಗೆ ಕಾಯಂ ಹುದ್ದೆ ನೀಡಿದ್ದೇವೆ. ಅವರು ನಿವೃತ್ತಿಯಾದಾಗ ಅವರ ಖಾತೆಯಲ್ಲಿ ₹10 ಲಕ್ಷ ಠೇವಣಿ ಇರಿಸಲಾಗುತ್ತದೆ. ತಿಂಗಳಿಗೆ ₹6,000 ಪಿಂಚಣಿ ನೀಡಲಾಗುತ್ತದೆ’ ಎಂದು ಹೇಳಿದರು. ‘ರಾಷ್ಟ್ರಕವಿ ಕುವೆಂಪು ಅವರು ಶಿವನನ್ನು ಪೌರಕಾರ್ಮಿಕರಿಗೆ ಹೋಲಿಸಿದ್ದಾರೆ. ಶಿವನನ್ನು ಅವರು ‘ಜಗದ ಜಲಗಾರ’ ಎಂದಿದ್ದಾರೆ. ಸ್ವಚ್ಛತಾ ಸೇನಾನಿಗಳದ್ದು ಅಷ್ಟು ಮಹತ್ವದ ಕೆಲಸ. ನೀವು ಇಲ್ಲದೇ ಇದ್ದರೆ, ಬೆಂಗಳೂರು ನಾರುತ್ತದೆ. ಪೌರಕಾರ್ಮಿಕರ ಅಭಿವೃದ್ಧಿಗಾಗಿ ಬಿಬಿಎಂಪಿ ಬಜೆಟ್‌ನಲ್ಲಿ ₹600 ಕೋಟಿ, ಅವರ ಮಕ್ಕಳ ಶಿಕ್ಷಣಕ್ಕಾಗಿ ₹700 ಕೋಟಿ ತೆಗೆದಿರಿಸಿದ್ದೇವೆ’ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

