ಡೇಟಿಂಗ್ ಆಯಪ್ ಮೂಲಕ ಪರಿಚಿತನಾದ ಯುವಕನನ್ನು ಲಾಡ್ಜ್ ಗೆ ಕರೆದೊಯ್ದು ಪ್ರಜ್ಞೆ ತಪ್ಪಿಸಿ ಆತನ ಬಳಿ ಇದ್ದ 58 ಗ್ರಾಂ ಚಿನ್ನಾಭರಣ ಹಾಗೂ ನಗದು ದೋಚಿ ಯುವತಿಯೊಬ್ಬಳು ಪರಾರಿಯಾದ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.ತಮಿಳುನಾಡು ಮೂಲದ ಅವಿನಾಶ್ ಕುಮಾರ್ ವಂಚನೆಗೊಳಗಾದವರು ಎಂದು ಗುರುತಿಸಲಾಗಿದೆ.ಅವಿನಾಶ್ ನೀಡಿದ ದೂರಿನನ್ವಯ ಕವಿಪ್ರಿಯಾ ಎಂಬಾಕೆಯ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ನಗರದ ಪೀಣ್ಯ ಬಳಿಯಿರುವ ನಾಗಸಂದ್ರದ ಪಿ.ಜಿ ಯೊಂದ್ರಲ್ಲಿ ವಾಸವಾಗಿದ್ದ ಅವಿನಾಶ್, ನಗರದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಎರಡು ತಿಂಗಳ ಹಿಂದೆ ಡೇಟಿಂಗ್ ಆಯಪ್‍ನಲ್ಲಿ ಯುವಕನನ್ನು ಆರೋಪಿತೆ ಪರಿಚಯಿಸಿಕೊಂಡಿದ್ದಳು. ಇಬ್ಬರು ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಫೋನ್‍ನಲ್ಲಿ ಮಾತನಾಡುತ್ತಿದ್ದರು. ಮಾತುಕತೆಯಂತೆ ನ.1ರಂದು ಇಂದಿರಾನಗರದ ರೆಸ್ಟೋರೆಂಟ್‍ವೊಂದರಲ್ಲಿ ಇಬ್ಬರೂ ಭೇಟಿಯಾಗಿ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪಾರ್ಟಿ ಮುಗಿದ ನಂತರ ಯುವತಿ ಲಾಡ್ಜ್ ವೊಂದರಲ್ಲಿ ಕೊಠಡಿ ಬುಕ್ ಮಾಡಿದ್ದಾಳೆ. ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ್ದ ಊಟವನ್ನು ಇಬ್ಬರು ಕುಳಿತುಕೊಂಡು ಸೇವಿಸಿದ್ದು, ಬಳಿಕ ಆತನಿಗೆ ಕುಡಿಯಲು ನೀರು ಕೊಟ್ಟಿದ್ದಾಳೆ. ಆ ನೀರನ್ನು ಕುಡಿದ ಬಳಿಕ ಯುವಕ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದ್ದು, ಈ ವೇಳೆ ಆತನ ಬಳಿ ಇದ್ದ ಚಿನ್ನದ ಸರ, ಚಿನ್ನದ ಕೈಬಳೆ, 10 ಸಾವಿರ ರೂ.ನಗದು ಸೇರಿದಂತೆ ಒಟ್ಟು 6.80ಲಕ್ಷ ರೂ. ಮೌಲ್ಯದ 58 ಗ್ರಾಂ ತೂಕದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ, ಆರೋಪಿ ಯುವತಿಯ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

