ಶಿವಮೊಗ್ಗ: ವರದಕ್ಷಿಣೆ ಕಿರುಕುಳ ತಾಳದೆ ಗೃಹಿಣಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಪತಿ ಮತ್ತು ಅತ್ತೆಗೆ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಯಶವಂತ್ ಕುಮಾರ್ ತೀರ್ಪು ನೀಡಿದ್ದಾರೆ. ಗೋಪಿಶೆಟ್ಟಿಕೊಪ್ಪದ ನಿವಾಸಿ ಪೃಥ್ವಿರಾಜ್(33), ಅವರ ತಾಯಿ ಟಿ. ಪುಷ್ಪಾ(58) ಶಿಕ್ಷೆಗೊಳಗಾದವರು. ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ ಕಾರಣ ಮನನೊಂದು 2022ರ ಜೂನ್ 16ರಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತುಂಗಾನಗರ ಠಾಣೆಯಲ್ಲಿ ಮೃತರ ಪೋಷಕರು ದೂರು ದಾಖಲಿಸಿದ್ದರು. ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಂತರ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದಾರೆ. ಪೃಥ್ವಿರಾಜ್ ಗೆ ಐದು ವರ್ಷ ಕಠಿಣ ಶಿಕ್ಷೆ 7,000 ರೂ. ದಂಡ, ಟಿ. ಪುಷ್ಪಾ ಅವರಿಗೆ ಮೂರು ವರ್ಷ ಸಜೆ ಮತ್ತು 4000 ರೂ. ದಂಡ ವಿಧಿಸಲಾಗಿದೆ. ಸರ್ಕಾರಿ ಅಭಿಯೋಜಕ ಶಾಂತರಾಜ್ ವಾದ ಮಂಡಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

