ಕಣ್ಣೂರು (ಕೇರಳ): ಸುಮಾರು ನಾಲ್ಕು ದಶಕಗಳಿಂದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು, ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದ 62 ವರ್ಷದ ಹಿರಿಯ ರೈತರೊಬ್ಬರು ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚೆರುಪುಳದಲ್ಲಿ ನಡೆದಿದೆ. ಮೃತರನ್ನು ಚೆರುಪುಳದ ಇಡವರಂ ನಿವಾಸಿ ಅಂಬಟ್ಟು ಎಲಿಯಾಸ್ (62) ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಎಲಿಯಾಸ್ ಅವರು ತಮ್ಮ ತೋಟದಲ್ಲಿ ಕ್ರಿಮಿನಾಶಕ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಅವರನ್ನು ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲಿಯಾಸ್ ಅವರು ಕೃಷಿ ಚಟುವಟಿಕೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಆರ್ಥಿಕ ಹೊರೆಯೇ ಅವರನ್ನು ಈ ತೀವ್ರ ನಿರ್ಧಾರಕ್ಕೆ ತಳ್ಳಿರಬಹುದು ಎಂದು ಶಂಕಿಸಲಾಗಿದೆ. ಎಲಿಯಾಸ್ ಅವರು ಕಣ್ಣೂರು ಮತ್ತು ನೆರೆಯ ಕಾಸರಗೋಡು ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಕಳೆದ 40 ವರ್ಷಗಳಿಂದ ಗುತ್ತಿಗೆ ಭೂಮಿಯಲ್ಲಿ ತರಕಾರಿ ಬೆಳೆಯುತ್ತಿದ್ದರು. ಈ ಬಾರಿ ಅವರು ಸುಮಾರು 2,500 ಬಾಳೆ ಸಸಿಗಳನ್ನು ನೆಟ್ಟಿದ್ದರು. ಆದರೆ, ಕಷ್ಟಪಟ್ಟರೂ ನಿರೀಕ್ಷಿತ ಆದಾಯ ಕೈಗೆ ಬಾರದಿದ್ದರಿಂದ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕೃಷಿಯಲ್ಲಿ ಅಪಾರ ಸಾಧನೆ ಮಾಡಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ರೈತನೊಬ್ಬ ಹೀಗೆ ಸಾಲದ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿರುವುದು ಸ್ಥಳೀಯ ಕೃಷಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

