ಲಾರಿಯೊಂದು ಆಕಸ್ಮಿಕ ಬೆಂಕಿಯಿಂದಾಗಿ ಸೇತುವೆ ಮೇಲೆ ಹೊತ್ತಿ ಉರಿದ ಘಟನೆ ಗುರುವಾರ ಮಧ್ಯರಾತ್ರಿ ಸುಮಾರಿಗೆ ಬೈಂದೂರಿನ ಉಪ್ಪುಂದ-ಬಿಜೂರು ರಾಷ್ಟ್ರೀಯ ಹೆದ್ದಾರಿ-66 ಸೇತುವೆಯಲ್ಲಿ ಸಂಭವಿಸಿದೆ. ಧಾರವಾಡದಿಂದ ಕುಂದಾಪುರಕ್ಕೆ ಪಶು ಆಹಾರವನ್ನು ಸಾಗಿಸುತ್ತಿದ್ದ ಲಾರಿ ಇದಾಗಿದ್ದು ರಾತ್ರಿ 1 ಗಂಟೆ ಸುಮಾರಿಗೆ ಯಡ್ತರೆ ಬೈಪಾಸ್ನಿಂದ ಮುಂದಕ್ಕೆ ಸಾಗಿ ಬಿಜೂರು ಬಳಿ ಆಗಮಿಸುವಾಗ ಹಿಂಬದಿಯ ಟಯರ್ ಸ್ಫೋಟಗೊಂಡು ಲಾರಿಗೆ ಬೆಂಕಿ ತಗುಲಿದೆ. ಭಾಗಶಃ ಲಾರಿ ಸಹಿತ ಒಳಗಿದ್ದ ಪಶು ಆಹಾರಗಳು ಅಗ್ನಿಗಾಹುತಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ. ಲಾರಿ ಚಾಲಕ ಚಂದ್ರಕಾಂತ್ ಎನ್ನುವರು ಅಪಾಯದಿಂದ ಪಾರಾಗಿದ್ದಾರೆ. ಸೇತುವೆ ಮೇಲೆ ಲಾರಿಗೆ ಬೆಂಕಿ ಹಿಡಿದು ಹೊತ್ತಿ ಉರಿದ ಕಾರಣ ಒಂದಷ್ಟು ಕಾಲ ಸಂಚಾರಕ್ಕೆ ಅಡಚಣೆಯಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಯಡ್ತರೆ ಜಂಕ್ಷನ್ ಬಳಿ ತಿರುವು ನೀಡಿ ವಾಹನಗಳು ಹೆದ್ದಾರಿಯ ಇನ್ನೊಂದು ರಸ್ತೆ ಮೂಲಕ ಸಾಗಲು ಅನುವು ಮಾಡಿಕೊಟ್ಟರು. ಬೈಂದೂರು ಅಗ್ನಿಶಾಮಕ ದಳದ ಪ್ರಮುಖ ಅಗ್ನಿಶಾಮಕರಾದ ಶ್ರೀನಿವಾಸ ಪೂಜಾರಿ, ರವೀಂದ್ರ ಎಸ್. ದೇವಾಡಿಗ, ಚಾಲಕ ಲೋಕೇಶ್ ಎಸ್., ಅಗ್ನಿಶಾಮಕರಾದ ಸುರೇಶ್ ಪಟಗಾರ, ಸಚಿನ್ ಮೊದಲಾದವರು ಸತತ ಮೂರ್ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸ್ಥಳೀಯ ಸಾರ್ವಜನಿಕರು ಸಹಕರಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

