ಮಂಡ್ಯ: ಜಿಲ್ಲೆಯ ಮಂಡ್ಯ ಬೂಕನಕೆರೆ ಐಚನಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಐಚನಹಳ್ಳಿ ಗ್ರಾಮದ ನೂರಾರು ಮಹಿಳೆಯರು ಕುಡಿಯುವ ನೀರು ಸರಬರಾಜು ಮಾಡಲು ವಿಫಲರಾಗಿರುವ ಅಧ್ಯಕ್ಷ ಮತ್ತು ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರುಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿದ ಮಹಿಳೆಯರು ಒಂದು ಕಿ.ಮೀ ದೂರದಿಂದ ಬಿಂದಿಗೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಭಾರೀ ಸಾಹಸದಿಂದ ಕುಡಿಯಲು ನೀರು ತರುತ್ತಿದ್ದೇವೆ. ಪಿಡಿಓ ರಮೇಶಮೂರ್ತಿ ಮತ್ತು ಅಧ್ಯಕ್ಷ ಮೋಹನ್ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಗಮನ ಹರಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಐಚನಹಳ್ಳಿ ಗ್ರಾಮದಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ನೆನಗುದಿಗೆ ಬಿದ್ದಿದ್ದು ಶಿಥಿಲವಾದ ವಿದ್ಯುತ್ ಕಂಬಗಳು ನೆಲಕ್ಕುರುಳಲು ಸಿದ್ಧವಾಗಿದ್ದರೂ ಪಂಚಾಯಿತಿಯು ವಿದ್ಯುತ್ ಕಂಬಗಳನ್ನು ಬದಲಿಸಲು ಕ್ರಮಕೈಗೊಂಡಿಲ್ಲ..ಚರಂಡಿಯಲ್ಲಿ ಹರಿಯಬೇಕಾದ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳದೇ ಬೇಜವಾಬ್ಧಾರಿತನವನ್ನು ಪ್ರದರ್ಶನ ಮಾಡುತ್ತಿದ್ದಾರೆ. ಕಳಪೆ ಕಾಮಗಾರಿಯನ್ನು ನಡೆಸಿ ಸರ್ಕಾರದ ಹಣವನ್ನು ಲೂಟಿಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮಕೈಗೊಂಡು ಅಕ್ರಮವೆಸಗಿರುವ ಪಿಡಿಓ ರಮೇಶಮೂರ್ತಿ ಅವರನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಾ.ಪಂ ಇಓ ಚಂದ್ರಮೌಳಿ ಅವರಿಗೆ ದಿಗ್ಬಂಧನ ವಿಧಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ಗ್ರಾಮದ ಮುಖಂಡರಾದ ಸಂದೀಪ್, ಶಿವಣ್ಣ, ಸಂತೋಷ, ದಯಾನಂದ, ರವಿ, ಕಮಲಮ್ಮ, ಪ್ರಭಾವತಿ, ಲಕ್ಷ್ಮಮ್ಮ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





