ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ದಾಳಿ ಮಾಡುವ ಬಗ್ಗೆ ಯೋಜನೆ ರೂಪಿಸಿದೆ ಎಂಬ ಗುಪ್ತಚರ ವರದಿ ಬೆನ್ನಲ್ಲೇ ಭದ್ರತಾ ಸಂಸ್ಥೆಗಳು ಹೈ ಅಲರ್ಟ್ ಘೋಷಿಸಿದ್ದು, ಪಂಜಾಬ್ ಮತ್ತು ಕಾಶ್ಮೀರದಲ್ಲಿ ಎರಡು ಐಇಡಿಗಳು ಪತ್ತೆಯಾಗಿವೆ. ಐಇಡಿ ಪತ್ತೆಯಾದ ಘಟನೆಯನ್ನು ಭಯೋತ್ಪಾದಕ ದಾಳಿಯ ಎಚ್ಚರಿಕೆಗೆ ಅಧಿಕಾರಿಗಳು ಸಂಬಂಧಿಸದಿದ್ದರೂ, ಘಟನೆಗಳ ಸಮಯವು ಕಳವಳವನ್ನುಂಟು ಮಾಡಿದೆ. ಪಂಜಾಬ್‌ನಲ್ಲಿ, ಶುಕ್ರವಾರ ಅಮೃತಸರದ ರಯಾ ಪೊಲೀಸ್ ಠಾಣೆ ಬಳಿ ಅನುಮಾನಾಸ್ಪದ ಚೀಲದಲ್ಲಿ ಐಇಡಿ ಪತ್ತೆಯಾಗಿದೆ. ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ಐಇಡಿಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಪೊಲೀಸ್ ಚೌಕ್ ಬಳಿ ಅನುಮಾನಾಸ್ಪದ ಚೀಲವೊಂದು ಪತ್ತೆಯಾಗಿದೆ. ತಕ್ಷಣ ಬಾಂಬ್ ನಿಷ್ಕ್ರಿಯ ದಳಕ್ಕೆ ಕರೆ ಮಾಡಿ, ಅದು ಐಇಡಿ ಎಂದು ದೃಢಪಡಿಸಿದರು. ನಂತರ, ಶಿಷ್ಟಾಚಾರದ ಪ್ರಕಾರ, ಅದನ್ನು ನಿಷ್ಕ್ರಿಯಗೊಳಿಸಲಾಯಿತು” ಎಂದು ಎಸ್‌ಎಸ್‌ಪಿ ಸೊಹೈಲ್ ಖಾಸಿಂ ಹೇಳಿದ್ದಾರೆ. ಕಾಶ್ಮೀರದ ಗಂಡೇರ್ಬಲ್ ಜಿಲ್ಲೆಯ ಸಫಾಪೋರಾದಲ್ಲಿ ಮತ್ತೊಂದು ಐಇಡಿ ಪತ್ತೆಯಾಗಿದೆ. ಸೇನೆಯ ಬಾಂಬ್ ಪತ್ತೆ ದಳ (ಬಿಡಿಎಸ್) ಮತ್ತು ಜಮ್ಮು ಕಾಶ್ಮೀರ ಪೊಲೀಸರು ಐಇಡಿಯನ್ನು ಪತ್ತೆಹಚ್ಚಿ ಕೆಲವೇ ಗಂಟೆಗಳಲ್ಲಿ ಅದನ್ನು ನಿಷ್ಕ್ರಿಯಗೊಳಿಸಿದರು. ಉತ್ತರ ಕಾಶ್ಮೀರದಲ್ಲಿ ಕಳೆದ ವಾರದಲ್ಲಿ ಪತ್ತೆಯಾದ ಮೂರನೇ ಐಇಡಿ ಇದಾಗಿದೆ. ಗುರುವಾರ, ತಂಗ್‌ಮರಾಗ್ ರಸ್ತೆಯಲ್ಲಿ ಒಂದು ಮತ್ತು ಬಾರಾಮುಲ್ಲಾದಲ್ಲಿ ಒಂದು ಐಇಡಿ ಪತ್ತೆಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

