Breaking News

ಮಹಾತ್ಮ ಗಾಂಧಿಯನ್ನು ತೆಗಳಿದ್ದ ಹಿಂದೂ ಧಾರ್ಮಿಕ ಮುಖಂಡನ ವಿರುದ್ಧ ಎಫ್‌ಐಆರ್

ರಾಯ್‌ಪುರ: ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮತ್ತು ಅವರ ಹಂತಕ ನಾಥುರಾಮ್ ಗೋಡ್ಸೆಯನ್ನು ಹೊಗಳಿದ್ದ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ವಿರುದ್ಧ ‘ದ್ವೇಷಪೂರಿತ ಹಾಗೂ ಪ್ರಚೋದನಕಾರಿ’ ಹೇಳಿಕೆ ನೀಡಿದ ಆರೋಪದ ಮೇಲೆ ಛತ್ತೀಸ್‌ಗಡ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಭಾನುವಾರ ಸಂಜೆ ರಾಯ್‌ಪುರದಲ್ಲಿ ನಡೆದ ಎರಡು ದಿನಗಳ ಧರ್ಮ ಸಂಸದ್‌ ಸಮ್ಮೇಳನದಲ್ಲಿ ಕಾಳಿಚರಣ್, ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಪದವನ್ನು ಬಳಸಿದ್ದರು ಮತ್ತು ಧರ್ಮದ ರಕ್ಷಣೆಗಾಗಿ ಕಟ್ಟಾ ಹಿಂದೂ ನಾಯಕನನ್ನು ಸರ್ಕಾರದ ಮುಖ್ಯಸ್ಥನನ್ನಾಗಿ ಆಯ್ಕೆ ಮಾಡುವಂತೆ ಜನರಲ್ಲಿ ಕೇಳಿಕೊಂಡಿದ್ದರು.

ಇವರ ಹೇಳಿಕೆಯು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರನ್ನು ಕೆರಳುವಂತೆ ಮಾಡಿತ್ತು.

ಕಾಂಗ್ರೆಸ್ ನಾಯಕ ಪ್ರಮೋದ್ ದುಬೆ ನೀಡಿರುವ ದೂರಿನ ಆಧಾರದ ಮೇಲೆ ಕಾಳಿಚರಣ್ ವಿರುದ್ಧ ಭಾನುವಾರ ರಾತ್ರಿ ತಿಕ್ರಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಾಳಿಚರಣ್, ‘ರಾಜಕೀಯದ ಮೂಲಕ ರಾಷ್ಟ್ರವನ್ನು ವಶಪಡಿಸಿಕೊಳ್ಳುವುದು ಇಸ್ಲಾಂನ ಗುರಿಯಾಗಿದೆ. ನಮ್ಮ ಮುಂದೆಯೇ ಅವರು 1947 ರಲ್ಲಿ (ವಿಭಜನೆಯನ್ನು ಉಲ್ಲೇಖಿಸಿ) ದೇಶಗಳನ್ನು ವಶಪಡಿಸಿಕೊಂಡರು. ಅವರು ಮೊದಲು ಇರಾನ್, ಇರಾಕ್ ಮತ್ತು ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡರು. ಬಳಿಕ ಅವರು ರಾಜಕೀಯದ ಮೂಲಕವೇ ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ವಶಪಡಿಸಿಕೊಂಡರು. ಗಾಂಧಿಯನ್ನು ಕೊಂದ ನಾಥೂರಾಂ ಗೋಡ್ಸೆಗೆ ನಾನು ನಮಸ್ಕರಿಸುತ್ತೇನೆ’ ಎಂದಿದ್ದರು.

ಇದನ್ನು ಖಂಡಿಸಿದ್ದ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಸುಶೀಲ್ ಆನಂದ್ ಶುಕ್ಲಾ, ‘ಮಹಾತ್ಮ ಗಾಂಧಿ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುವುದು ಖಂಡನೀಯ. ಕಾಳಿಚರಣ್ ಮೊದಲು ಅವರು ಸಂತನೆಂದು ಸಾಬೀತುಪಡಿಸಲಿ’ ಎಂದಿದ್ದಾರೆ.

Share News

About admin

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *