ಬೆಂಗಳೂರು ಮಾಗಡಿ ರಸ್ತೆಯ ಅಂದ್ರಳ್ಳಿಯಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿ ಆದಿ ಕರ್ನಾಟಕ ಜನಾಂಗಕ್ಕೆ ಸೇರಿದ ರೋಜಾ ಅವರು ತಾಲ್ಲೂಕಿನ ಯಡಿಯೂರು ಹೋಬಳಿ ತಿಗಳರಪಾಳ್ಯ ಗ್ರಾಮದಲ್ಲಿರುವ ತನ್ನ ತಾಯಿ ಮನೆಗೆ ಮಾರಮ್ಮ ದೇವಿ ಹಬ್ಬಕ್ಕೆಂದು ಬಂದಿದ್ದರು. ಸೋಮವಾರ ರಾತ್ರಿ ಗ್ರಾಮದಲ್ಲಿರುವ ವೆಂಕಟರಮಣ ಮೂಡಲಗಿರಿ ದೇವಾಲಯಕ್ಕೆ ತನ್ನ ತಾಯಿ ಮತ್ತು ತಂಗಿಯನ್ನು ಕರೆದುಕೊಂಡು ಹೋಗಿದ್ದಾರೆ. ದೇವಸ್ಥಾನದ ಒಳಗಡೆ ಹೋದಾಗ ಅರ್ಚಕ ಹನುಮಯ್ಯ, ಗ್ರಾಮದ ಮಹಿಳೆ ಜಯಲಕ್ಷ್ಮಮ್ಮ, ಶ್ರೀನಿವಾಸ್ ಹಾಗೂ ಹದಿನಾರು ಮಂದಿ ಸೇರಿಕೊಂಡು, ‘ನೀನು ಕೀಳು ಜಾತಿಯವಳು. ದೇವಸ್ಥಾನದ ಒಳಗೆ ಬರಬಾರದು’ ಎಂದು ಜಾತಿ ಹಿಡಿದು ನಿಂದಿಸಿ, ಗಲಾಟೆ ಮಾಡಿ ತಲೆಯ ಕೂದಲನ್ನು ಹಿಡಿದು ಎಳೆದಾಡಿ ದೇವಸ್ಥಾನದಿಂದ ಹೊರಗೆ ತಳ್ಳಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. ಈ ಸಂಬಂಧ ಮಂಗಳವಾರ ಮಹಿಳೆ ಅಮೃತೂರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಅರ್ಚಕನನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

