ಬೆಂಗಳೂರು ಗ್ರಾಮಾಂತರ: ಟೀಮ್ ಇಂಡಿಯಾ T20 ಫೈನಲ್ ಪಂದ್ಯ ಉತ್ಸಾಹದ ಮಧ್ಯೆ ನೆಲಮಂಗಲದಲ್ಲಿ ಯುವಕರ ನಡುವೆ ತೀವ್ರ ಗಲಾಟೆ ನಡೆದಿದೆ. ಕುಣಿಗಲ್ ಬೈಪಾಸ್ ಬಳಿ ಭಾನುವಾರ (ಮಾ.8) ನಡುರಾತ್ರಿ ಈ ಘಟನೆ ನಡೆದಿದ್ದು, ಎರಡು ಗುಂಪುಗಳು ಪರಸ್ಪರ ಹಲ್ಲೆ ನಡೆಸಿದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಕೈಯಲ್ಲಿ ಬಿಯರ್ ಬಾಟಲಿ ಮತ್ತು ದೊಣ್ಣೆಗಳನ್ನು ಹಿಡಿದು ಯುವಕರು ಒಬ್ಬರ ಮೇಲೆ ಒಬ್ಬರು ದಾಳಿ ಮಾಡಿದ್ದಾರೆ. ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ಪ್ರದೇಶದ ಯುವಕರ ನಡುವೆ ಈ ಸಂಘರ್ಷ ನಡೆದಿದ್ದು, ಮದ್ಯಪಾನ ಮಾಡಲು ಬಂದಿದ್ದ ವೇಳೆ ವಾಗ್ವಾದ ಜಗಳಕ್ಕೆ ತಿರುಗಿದಂತೆ ತಿಳಿದುಬಂದಿದೆ. ಈ ಗಲಾಟೆಯ ಬಳಿಕ ಕೆಲವರು ಬಾಟಲಿ ಮತ್ತು ದೊಣ್ಣೆಗಳನ್ನು ಹಿಡಿದು ನಗರದ ವಿವಿಧ ಭಾಗಗಳಲ್ಲಿ ಸುತ್ತಾಡಿದರೆಂದು ಹೇಳಲಾಗುತ್ತಿದೆ. ಇದರಿಂದ ರಾತ್ರಿಯಿಡೀ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಸಾಕಷ್ಟು ಪ್ರಯತ್ನ ನಡೆಸಿ ಯುವಕರ ಗುಂಪುಗಳನ್ನು ಚದುರಿಸಿದರು. ಬಳಿಕ ಎರಡೂ ಗುಂಪಿನವರಿಂದ ಪ್ರತ್ಯೇಕ ದೂರುಗಳು ದಾಖಲಾಗಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

