ಬೆಂಗಳೂರು: ತರಕಾರಿ ಸಾಗಾಣಿಕೆ ಹೆಸರಿನಲ್ಲಿ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಸಿಸಿಬಿ ಪೊಲೀಸರು ಬಯಲುಗೊಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಭಾನುವಾರ ಮಧ್ಯಾಹ್ನ ದಾಳಿ ನಡೆಸಿದ ಮಾದಕ ದ್ರವ್ಯ ನಿಗ್ರಹ ದಳ, ನಾಯಂಡಹಳ್ಳಿ ಬಳಿ ಲಾರಿಯನ್ನು ಸೀಜ್ ಮಾಡಿ ದೊಡ್ಡ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಂಡಿದೆ. ಆಂಧ್ರ ಪ್ರದೇಶದ ವೈಜಾಗ್ ಸಮೀಪದ ಅರಕ್ಕು ಪ್ರದೇಶದಿಂದ ಬೆಂಗಳೂರಿಗೆ ತರಲಾಗುತ್ತಿದ್ದ ಗಾಂಜಾವನ್ನು ಲಾರಿಯ ಕಂಟೇನರ್‌ನಲ್ಲಿ ಗುಪ್ತವಾಗಿ ಸಾಗಿಸಲಾಗುತ್ತಿತ್ತು. ಈ ಲಾರಿ ಬೆಂಗಳೂರು ಮೂಲಕ ಮೈಸೂರು ಹಾಗೂ ಮಳವಳ್ಳಿ ಕಡೆಗೆ ತೆರಳುತ್ತಿತ್ತು ಎನ್ನಲಾಗಿದೆ. ದಾಳಿಯ ವೇಳೆ ಬರೋಬ್ಬರಿ 332 ಕೆ.ಜಿ ಗಾಂಜಾ ಪತ್ತೆಯಾಗಿದ್ದು, ಇದರ ಮೌಲ್ಯ 3 ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಪ್ರಕರಣ ಸಂಬಂಧ ರವಿ ಎಂಬ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಸಿಬಿ ಪೊಲೀಸರ ಈ ಕಾರ್ಯಾಚರಣೆ ಮೂಲಕ ದೊಡ್ಡ ಮಟ್ಟದ ಗಾಂಜಾ ಜಾಲವನ್ನು ಭೇದಿಸುವಲ್ಲಿ ಮಹತ್ವದ ಸುಳಿವು ಸಿಕ್ಕಿದ್ದು, ಇನ್ನಷ್ಟು ಆರೋಪಿಗಳ ಬಂಧನಕ್ಕಾಗಿ ತನಿಖೆ ಮುಂದುವರೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

