ನಗರದ ಜಯದೇವ ವೃತ್ತದಲ್ಲಿರುವ ಮಸಾಲ ಮಂಡಕ್ಕಿ ಅಂಗಡಿಯಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿತು. ಸಿಲಿಂಡರ್ ಅನಿಲ ಸೋರಿಕೆಯಿಂದ ಕಾಣಿಸಿಕೊಂಡ ಬೆಂಕಿಯು ಸ್ಥಳದಲ್ಲಿದ್ದ ಜನರಲ್ಲಿ ಕೆಲಹೊತ್ತು ಆತಂಕ ಸೃಷ್ಟಿಸಿತು. ರಸ್ತೆ ಬದಿಯಲ್ಲಿನ ಅಂಗಡಿ ಕೆಲ ಕಾಲ ಹೊತ್ತಿ ಉರಿಯಿತು. ಅಂಗಡಿಯಲ್ಲಿದ್ದ ಮಂಡಕ್ಕಿ ಚೀಲಗಳು, ಆಹಾರ ಧಾನ್ಯಗಳು, ತರಕಾರಿ, ಅಡುಗೆ ಸಾಮಗ್ರಿ ಹಾಗೂ ಇನ್ನಿತರ ವಸ್ತುಗಳು ಸುಟ್ಟು ಕರಕಲಾದವು. ಸ್ಥಳದಲ್ಲಿದ್ದ ಜನರು ಸಮಯಪ್ರಜ್ಞೆ ಮೆರೆದು ಸಿಲಿಂಡರ್ ಅನ್ನು ಹೊರಗೆಳೆದು ಸುರಕ್ಷಿತವಾಗಿ ಅನಿಲ ಸೋರಿಕೆಯನ್ನು ತಡೆದು, ಬೆಂಕಿ ನಂದಿಸಿದರು. ಇದರಿಂದ ಭಾರಿ ಅನಾಹುತವೊಂದು ತಪ್ಪಿತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಪಕ್ಕದ ಅಂಗಡಿಗಳಿಗೂ ವ್ಯಾಪಿಸುತ್ತಿದ್ದ ಬೆಂಕಿಯನ್ನು ನಂದಿಸಿದರು. ‘ಅಗ್ನಿ ಅವಘಡದಿಂದ ಅಂದಾಜು ₹ 1 ಲಕ್ಷ ನಷ್ಟ ಸಂಭವಿಸಿದೆ’ ಎಂದು ಅಂಗಡಿಯ ಮಾಲೀಕರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

