ಬೆಂಗಳೂರು: ರಾಜ್ಯದಲ್ಲಿ ಬೈ ಎಲೆಕ್ಷನ್ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಗೆಲುವಿಗಾಗಿ ಘಟಾನುಘಟಿಗಳನ್ನು ಮೈದಾನಕ್ಕಿಳಿಸಿದೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಪ್ರಚಾರ ಜೋರಾಗಿದ್ದು, ಮುಸ್ಲಿಂ ಸಮುದಾಯದೊಳಗಿನ ಅಸಮಾಧಾನ ತಣ್ಣಗಾಗಿಸಲು ಕಾಂಗ್ರೆಸ್ ಮುಸ್ಲಿಂ ನಾಯಕರು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಈ ನಡುವೆ, ಮುಸ್ಲಿಂ ಪಕ್ಷೇತರ ಅಭ್ಯರ್ಥಿಗಳನ್ನು ಮನವೊಲಿಸಲು ತೆರಳಿದ್ದ ಮಹಮದ್ ನಲಪಾಡ್ ನೀಡಿದ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ. “ಗಡ್ಡ ಬಿಟ್ಟುಕೊಂಡು ಟೋಪಿ ಹಾಕಿಕೊಂಡವರೆಲ್ಲಾ ನಿಜವಾದ ಮುಸ್ಲಿಂರಲ್ಲ” ಎಂಬ ನಲಪಾಡ್ ಹೇಳಿಕೆಗೆ ದಾವಣಗೆರೆ ಮುಸ್ಲಿಂ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಗೆ ಸಂಬಂಧಿಸಿ ಕೆಲವು ಮೌಲ್ವಿಗಳು ಹಾಗೂ ಮುಸ್ಲಿಂ ಮುಖಂಡರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯ ಹೇಳಿಕೆ ನೀಡಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದ್ದು, ವೈಯಕ್ತಿಕ ಭಿನ್ನಾಭಿಪ್ರಾಯ ಇದ್ದರೆ ವ್ಯಕ್ತಿಯ ವಿರುದ್ಧ ಮಾತನಾಡಲಿ, ಆದರೆ ಸಮುದಾಯದ ಧಾರ್ಮಿಕ ಗುರುತುಗಳ ಬಗ್ಗೆ ಹೇಳಿಕೆ ನೀಡಬಾರದು ಎಂದು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ, ನಲಪಾಡ್ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದ್ದು, ಸುರ್ಜೇವಾಲ ದೂರವಾಣಿ ಮೂಲಕ ನಲಪಾಡ್‌ಗೆ ವಾರ್ನಿಂಗ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಚುನಾವಣಾ ಸಂದರ್ಭದಲ್ಲಿಯೇ ಯಾವುದೇ ವಿವಾದಾತ್ಮಕ ಹೇಳಿಕೆ ನೀಡದಂತೆ ರಾಜ್ಯ ನಾಯಕರಿಗೂ ಸೂಚನೆ ನೀಡಲಾಗಿದೆ ಎಂದು ಮೂಲಗಳು ಹೇಳುತ್ತಿವೆ. ದಾವಣಗೆರೆಯಲ್ಲಿ ನಡೆದ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ಸುರ್ಜೇವಾಲ ಇಬ್ಬರೂ ನಲಪಾಡ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಮಹಮದ್ ನಲಪಾಡ್ ದಾವಣಗೆರೆಯಿಂದ ಕೇರಳದತ್ತ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

