ಕುಂಬಳೆ: ಸೀತಾಂಗೋಳಿಯಲ್ಲಿ ಹಾಡುಹಗಲೇ ಬಾಪಾಲಿಪೊನ ಕುಂಟಿಕಾನ ನಿವಾಸಿ ಸಫಾಹಿದ್ ಯಾನೆ ಶಫಾಯಿತ್ (35) ಅವರನ್ನು ಕೊಲೆಗೈದ ಪ್ರಕರಣದ ಆರೋಪಿಯನ್ನು ಗಂಟೆಗಳೊಳಗೆ ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ನಾಯ್ಕಾಪು ಕೋಟೆಕಾರು ನಿವಾಸಿ ಶ್ರೀನಿವಾಸ (39) ಬಂಧಿತ ವ್ಯಕ್ತಿ. ಎ.28 ರಂದು ಮಧ್ಯಾಹ್ನ 2.30 ರ ವೇಳೆ ಸೀತಾಂಗೋಳಿಯ ಮದ್ಯದಂಗಡಿ ಸಮೀಪದ ಕಟ್ಟಡದ ಹಿಂಬದಿಯಲ್ಲಿ ಶಫಾಯತ್ ಅವರ ಮೃತದೇಹ ಪತ್ತೆಯಾಗಿತ್ತು. ಅದನ್ನು ಕಂಡ ವ್ಯಕ್ತಿಗಳು ನೀಡಿದ ಮಾಹಿತಿಯಂತೆ ಕುಂಬಳೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಶಫಾಯತ್ ಅವರ ತಲೆಗೆ ಹೊಡೆದು ಕೊಲೆಗೈದಿರುವುದು ತಿಳಿದು ಬಂದಿತ್ತು. ತಲೆಗೆ ಹೊಡೆಯಲು ಉಪಯೋಗಿಸಿದ ಮರದ ತುಂಡು ಸಮೀಪದಲ್ಲಿ ಪತ್ತೆಯಾಗಿತ್ತು. ಅದರಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಶ್ರೀನಿವಾಸನನ್ನು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಉಂಟಾದ ವಾಗ್ವಾದವೇ ಕೊಲೆಗೆ ಕಾರಣವೆಂದು ಬಂಧಿತ ಆರೋಪಿ ಶ್ರೀನಿವಾಸ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಮಂಗಳವಾರ ಬೆಳಗ್ಗೆ ಶಫಾಯತ್ ಹಾಗೂ ಶ್ರೀನಿವಾಸ ಅವರ ಮಧ್ಯೆ ವಾಗ್ವಾದ ನಡೆದಿತ್ತೆನ್ನಲಾಗಿದೆ. ಇದರ ಮುಂದುವರಿಕೆಯಾಗಿ ಈ ಕೊಲೆ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೊಲೆ ಕೃತ್ಯದಲ್ಲಿ ಬೇರೆ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

