ಹನೂರು: ತಾಲೂಕಿನ ರಾಮಾಪುರ ಸಮೀಪದ ನಾಲ್‌ರೋಡ್ ಬಳಿ ಬುಧವಾರ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್ ತಡೆಗೋಡೆಗೆ ಡಿಕ್ಕಿ ಹೊಡೆದು ಅರಣ್ಯ ಪ್ರದೇಶದತ್ತ ನುಗ್ಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆ 11 ಗಂಟೆಯಲ್ಲಿ ಹನೂರಿನಿಂದ ಜಲ್ಲಿಪಾಳ್ಯದ ಕಡೆಗೆ ಹೊರಟ ಸಾರಿಗೆ ಬಸ್‌ನಲ್ಲಿ 39 ಪ್ರಯಾಣಿಕರಿದ್ದರು. ಈ ವೇಳೆ ನಾಲ್‌ರೋಡ್ ಬಳಿ ಎದುರು ಬಂದ ವಾಹನಕ್ಕೆ ದಾರಿ ಬಿಡಲು ರಸ್ತೆ ಬದಿಗೆ ಸರಿಸಿದಾಗ ಬಸ್ ಚಾಲಕ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಪರಿಣಾಮ ಬಸ್ ತಡೆಗೋಡೆಗೆ ಡಿಕ್ಕಿ ಹೊಡೆದು ಅರಣ್ಯ ಪ್ರದೇಶದತ್ತ ನುಗ್ಗಿದೆ. ಕೆಲವರಿಗೆ ಸಣ್ಣಪುಟ್ಟ ನೋವಾಗಿದ್ದು, ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತೀಚೆಗೆ ಮಲೆಮಹದೇಶ್ವರ ಬೆಟ್ಟದ ತಾಳುಬೆಟ್ಟದ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮಗುಚಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದೀಗ ನಾಲ್‌ರೋಡ್ ಬಳಿ ಬಸ್ ಅರಣ್ಯ ಪ್ರದೇಶಕ್ಕೆ ನುಗ್ಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

