ಕೊಪ್ಪಳ: ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಆರೋಪದಲ್ಲಿ ಯುವಕನೋರ್ವನ ಮೇಲೆ ತಂಡವೊಂದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆಗೆ ಸಂಬಂಧಿಸಿ ನಗರ ಠಾಣೆಯ ಪೊಲೀಸರು, 30ಕ್ಕೂ ಅಧಿಕ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ. ಮೊಬೈಲ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸಮೀರ್ ಅಹ್ಮದ್ ಮೂಲಿಮನಿ (22) ಮೇ 6 ರಂದು ರಾತ್ರಿ 8:30ರ ಸುಮಾರಿಗೆ ತಾನು ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಹೋಟೆಲ್ ನಲ್ಲಿ ಕುಳಿತಿದ್ದರೆನ್ನಲಾಗಿದೆ. ಈ ವೇಳೆ ಕೆಲ ಯುವಕರು ಆಗಮಿಸಿ ಇಬ್ಬರ ಹೆಸರುಗಳನ್ನು ಕೇಳಿದ್ದಾರೆ. ಪ್ರೀತಿಸುವ ವಿಷಯ ತಿಳಿಸಿದ ಬಳಿಕ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸಮೀರ್ ದೂರಿನಲ್ಲಿ ತಿಳಿಸಿದ್ದಾರೆ. “ನನ್ನ ಕಣ್ಣಿಗೆ ಬಟ್ಟೆ ಕಟ್ಟಿ ಬೈಕಿನಲ್ಲಿ ಹೊಸಪೇಟೆ ಕಡೆ ರಾಷ್ಟ್ರೀಯ ಹೆದ್ದಾರಿ ಬಳಿ ಕರೆದೊಯ್ದು ” ಹಿಂದೂ ಹುಡುಗಿಯನ್ನು ಪ್ರೀತಿಸುತ್ತೀಯಾ” ಎಂದು ನಿಂದಿಸಿ ಹಲ್ಲೆ ಮಾಡಿದ್ದಾರೆ. “ಇನ್ನು ಮುಂದೆ ಆಕೆಯ ಜೊತೆ ಕಾಣಿಸಿಕೊಂಡರೆ ಜೀವಂತವಾಗಿ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾರೆ”ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಲ್ಲೆಗೈದ ಬಳಿಕ ಕಣ್ಣಿಗೆ ಬಟ್ಟೆ ಕಟ್ಟಿ ಜಿಲ್ಲಾಸ್ಪತ್ರೆಯ ಸಮೀಪ ಬಿಟ್ಟು ಹೋಗಿರುವುದಾಗಿ ಸಮೀರ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಬಾಲಕಿಯ ಸಹೋದರರಾದ ಆಶಿಷ್, ನೀಲೇಶ್ ಸೇರಿದಂತೆ ಇತರ 30 ಮಂದಿಯ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

