ದಾಂಡೇಲಿ: ಮಾದಕ ವಸ್ತುಗಳ ಸಂಗ್ರಹ, ಮಾರಾಟ ಪ್ರಕರಣದಲ್ಲಿ ಸಿಲುಕಿದ್ದ ಇಲ್ಲಿನ ಸುಭಾಷ ನಗರದ ನಿವಾಸಿ ಆಯಾನ್ ಶಾನವಾಜ್ ಇಮ್ಮಿಯಾಜ್ ಖಾನ್ (22) ಎಂಬಾತನನ್ನು ಬಂಧಿಸಿ, ಬಳ್ಳಾರಿ ಕಾರಾಗೃಹಕ್ಕೆ ರವಾನಿಸಲಾಗಿದೆ. ‘ಮಾದಕ ವಸ್ತುಗಳನ್ನು ಸಂಗ್ರಹ, ಸಾಗಾಟ, ಸರಬರಾಜು ಮತ್ತು ಮಾರಾಟ ಮಾಡುವ ವೃತ್ತಿಪರ ಡ್ರಗ್ ಪೆಡ್ಲರ್ ಆಗಿದ್ದ ಆಯಾನ್ ಮೇಲೆ ದಾಂಡೇಲಿ ಠಾಣೆಯಲ್ಲಿ 5 ಹಾಗೂ ಹುಬ್ಬಳ್ಳಿ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ. ಹಲವಾರು ಬಾರಿ ನ್ಯಾಯಾಂಗ ಬಂಧನ ವಿಧಿಸಿದರೂ ಸುಧಾರಣೆಗೊಳ್ಳದೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದ. ಪದೇ ಪದೇ ಕೃತ್ಯಗಳಲ್ಲಿ ಭಾಗಿಯಾಗಿದ್ದರಿಂದ ಐಜಿಪಿ, ಎಸ್‌ಪಿ ಆದೇಶ ಆಧರಿಸಿ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮಾದಕ ದ್ರವ್ಯ ನಿಗ್ರಹ ಕಾಯ್ದೆ ಮೂಲಕ ಡ್ರಗ್ ಪೆಡ್ಲರ್‌ನನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಿದ ಮೊದಲ ಪ್ರಕರಣ ಇದಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

