ಗದಗ ಜಿಲ್ಲೆಯ ಬೆಳಹೋಡ ಗ್ರಾಮದಲ್ಲಿ ಅಕ್ರಮ ಬಡ್ಡಿ ದಂಧೆಯ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ರೈತ ಮಹ್ಮದ್ ರಫೀಕ್ ಮತ್ತು ಅವರ ಸಹೋದರರು 17 ಲಕ್ಷ ರೂ. ಸಾಲ ಪಡೆದಿದ್ದು, ಅದೇ ನೆಪದಲ್ಲಿ ಕೋಟ್ಯಂತರ ಮೌಲ್ಯದ 5 ಎಕರೆ ಕೃಷಿ ಭೂಮಿಯನ್ನು ದಂಧೆಕೋರರು ವಂಚನೆಯ ಮೂಲಕ ತಮ್ಮದಾಗಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆರೋಪಿಗಳು ಮುಂಗಡ ಬಡ್ಡಿ ಹೆಸರಿನಲ್ಲಿ 5 ಲಕ್ಷ ರೂ. ಕಡಿತಗೊಳಿಸಿ, ರೈತನ ಕೈಗೆ ಕೇವಲ 12 ಲಕ್ಷ ರೂ. ನೀಡಿದ್ದರು. ಜಮೀನಿನ ಅಡಮಾನ ಪತ್ರ ಮಾಡಿಸಿಕೊಳ್ಳುವುದಾಗಿ ನಂಬಿಸಿ, ಉಪನೋಂದಣಾಧಿಕಾರಿ ಕಚೇರಿಯಲ್ಲಿ ರೈತನಿಗೆ ತಿಳಿಯದಂತೆ ನೇರ ಖರೀದಿ ಪತ್ರ ಬರೆಸಿಕೊಂಡು ಭೂಮಿ ಕಬಳಿಸಿದ್ದಾರೆ ಎನ್ನಲಾಗಿದೆ. ರೈತ ಕುಟುಂಬದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರೌಡಿಶೀಟರ್ ಯುವರಾಜ್ ಕೊರವರ ಹಾಗೂ ರವಿ ಕೌಜಗೇರಿಯನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

