ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಗಿಡಗಾನಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೊಬ್ಬ ತನ್ನ ಪತ್ನಿಯನ್ನು ಕುತ್ತಿಗೆಗೆ ವೈರ್ ಬಿಗಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತೆಯನ್ನು ಪವಿತ್ರಾ (35) ಎಂದು ಗುರುತಿಸಲಾಗಿದ್ದು, ಆರೋಪಿ ಪತಿ ವೆಂಕಟೇಶ್ ಪರಾರಿಯಾಗಿದ್ದಾನೆ. ಮದುವೆಯಾಗಿ 15 ವರ್ಷಗಳಾಗಿದ್ದ ದಂಪತಿಗೆ ಮೂವರು ಮಕ್ಕಳಿದ್ದಾರೆ. ವೆಂಕಟೇಶ್‌ಗೆ ಮದ್ಯದ ಚಟವಿದ್ದು, ಸಾಲದ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಘಟನೆ ನಡೆದ ದಿನವೂ ಮಾತಿನ ಚಕಮಕಿ ನಡೆದು, ಕೋಪಗೊಂಡ ವೆಂಕಟೇಶ್ ಪತ್ನಿಯ ಕುತ್ತಿಗೆಗೆ ವೈರ್ ಬಿಗಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿ ವೆಂಕಟೇಶ್ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

