ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಚಿನ್ನದ ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಿದ್ದು, ಸುಮಾರು ₹1.80 ಕೋಟಿ ಮೌಲ್ಯದ 1.3 ಕೆ.ಜಿ. ಚಿನ್ನದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕೌಲಾಲಂಪುರದಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು ಆರೋಪಿಗಳು ಈ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಕಸ್ಟಮ್ಸ್ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಪ್ರಯಾಣಿಕರ ಲಗೇಜ್ ಟ್ರ್ಯಾಲಿಗಳ ಕೆಳಭಾಗಕ್ಕೆ ಚಿನ್ನದ ಬಿಸ್ಕೆಟ್‌ಗಳನ್ನು ಅಂಟಿಸುತ್ತಿದ್ದರು. ಬಳಿಕ ಅಮಾಯಕ ಪ್ರಯಾಣಿಕರು ಅದೇ ಟ್ರ್ಯಾಲಿಗಳನ್ನು ಬಳಸಿಕೊಂಡು ಕಸ್ಟಮ್ಸ್ ವಲಯ ದಾಟಿದ ನಂತರ ಚಿನ್ನವನ್ನು ತೆಗೆದುಕೊಂಡು ಪರಾರಿಯಾಗಲು ಯೋಜಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆದಿದ್ದ ಡಿಆರ್‌ಐ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಕಣ್ಣಾವಲು ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಕಳ್ಳಸಾಗಣೆ ಜಾಲದ ಮಾಹಿತಿ ಬಹಿರಂಗವಾಗಿದ್ದು, ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

