ಭಟ್ಕಳ: ಮನೆ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮಾವ ಮತ್ತು ಅಳಿಯನ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಪರಸ್ಪರ ಹಲ್ಲೆ ನಡೆಸಿಕೊಂಡು ಇಬ್ಬರೂ ಆಸ್ಪತ್ರೆ ಸೇರಿದ ಘಟನೆ ಆ.1ರ ಶನಿವಾರ ನಗರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಮೊದಲ ದೂರಿನಲ್ಲಿ, ಆಜಾದ್ ನಗರದ ಶೇಡಕುಳಿಹೊಂಡ ಪ್ರದೇಶದ ನಿವಾಸಿ ಮಹಮ್ಮದ್ ಅಫಾನ್ ಇಸ್ಮಾಯಿಲ್ ಶೇಖ್ (34) ಅವರು ತಮ್ಮ ಮಾವ ಅಮೀರ್ ಶೇಖ್ ವಿರುದ್ಧ ದೂರು ನೀಡಿದ್ದಾರೆ. ಮನೆ ಬಾಡಿಗೆ ವಿಚಾರದಲ್ಲಿ ಮಾವ ಅಮೀರ್ ಶೇಖ್ ವಾಗ್ವಾದ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯ ಮುಂಭಾಗದಲ್ಲಿದ್ದ ಟೈಲ್ಸ್ ತುಂಡಿನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಲ್ಲದೆ ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಗಾಯಗೊಂಡ ಅಫಾನ್ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಇದೇ ಘಟನೆಗೆ ಸಂಬಂಧಿಸಿದಂತೆ ಮೂಸಾನಗರ ನಿವಾಸಿ, ಮಾವ ಅಮೀರ್ ಶೇಖ್ (61) ಅವರು ಅಳಿಯ ಮೊಹಮ್ಮದ್ ಅಫಾನ್ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ. ಅಫಾನ್ ಕಳೆದ 7 ತಿಂಗಳಿನಿಂದ ತಮಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದು, ಬಾಡಿಗೆ ಪಾವತಿಸದ ಕುರಿತು ಈಗಾಗಲೇ ನ್ಯಾಯಾಲಯ/ಪೊಲೀಸ್ ಠಾಣೆಯಲ್ಲಿ ದೂರು ಇರುವುದಾಗಿ ತಿಳಿಸಿದ್ದಾರೆ. ತಾವು ಮನೆಯಲ್ಲಿ ಇಲ್ಲದ ವೇಳೆ ಬಂದು ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದನ್ನು ಪ್ರಶ್ನಿಸಿದ್ದಕ್ಕೆ, ಅಫಾನ್ ಕಲ್ಲಿನಿಂದ ತಮ್ಮ ತಲೆ ಹಾಗೂ ದೇಹಕ್ಕೆ ಹೊಡೆದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ. ಇಬ್ಬರ ದೂರುಗಳನ್ನು ಸ್ವೀಕರಿಸಿರುವ ಭಟ್ಕಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

