ಬೆಂಗಳೂರು : ಇಲ್ಲಿನ ನೆಲಮಂಗಲ ಟೋಲ್ ಬಳಿ ಬಿಎಂಟಿಸಿ ಬಸ್ ಸಿಬ್ಬಂದಿಯೊಬ್ಬರ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಸ್ ಏರಲು ಯತ್ನಿಸಿದ್ದ ಭಿಕ್ಷುಕನನ್ನು ಕಂಡಕ್ಟರ್ ಕಾಲಿನಿಂದ ತಳ್ಳಿದ ಘಟನೆ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಘಟನೆಯ ವೇಳೆ ಭಿಕ್ಷುಕ ನೆಲಕ್ಕೆ ಬಿದ್ದರೂ ಸಿಬ್ಬಂದಿ ಯಾವುದೇ ಸ್ಪಂದನೆ ತೋರದೆ ಬಸ್‌ನೊಂದಿಗೆ ಸ್ಥಳದಿಂದ ತೆರಳಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ದೃಶ್ಯವನ್ನು ಅಲ್ಲೆ ಸಾಗುತ್ತಿದ್ದ ಬೈಕ್ ಸವಾರ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ. ಈ ವಿಡಿಯೋ ವೈರಲ್ ಆದ ಬಳಿಕ ಬಿಎಂಟಿಸಿ ಸಿಬ್ಬಂದಿಯ ಈ ಅಮಾನವೀಯ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರ ಸೇವೆಗಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಯಿಂದ ಇಂತಹ ನಡೆ ಸ್ವೀಕಾರಾರ್ಹ ಅಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

