ಪೊಲೀಸ್ ಠಾಣೆಯಲ್ಲೇ ಯುವಕನ ಅನುಮಾನಾಸ್ಪದ ಸಾವು; ಕುಟುಂಬದಿಂದ ‘ಲಾಕಪ್ ಡೆತ್’ ಗಂಭೀರ ಆರೋಪ.!
ವಿಚಾರಣೆಗೆ ಕರೆದೊಯ್ದ ಯುವಕ ಮೃತ! ವಿಜಯನಗರ ಠಾಣೆ ವಿರುದ್ಧ ‘ಲಾಕಪ್ ಡೆತ್’ ಆರೋಪದಿಂದ ಸಂಚಲನ ..
ಪೊಲೀಸ್ ಠಾಣೆಯಲ್ಲಿ ಯುವಕನ ಸಾವು: ಹಲ್ಲೆಯಿಂದಲೇ ಸಾವು’ ಎಂದು ಕುಟುಂಬದ ಆರೋಪ; ಲಾಕಪ್ ಡೆತ್ ಪ್ರಕರಣಕ್ಕೆ ತಿರುವು..
ವಿಜಯನಗರ: ಹಗರಿಬೊಮ್ಮನಹಳ್ಳಿ: ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆತರಲಾಗಿದ್ದ ಕಟ್ಟಡ ಕಾರ್ಮಿಕ ಸಿ. ಖಲೀಲುಲ್ಲಾ (38) ಅವರ ಅನುಮಾನಾಸ್ಪದ ಸಾವು ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಹೆಡ್ ಕಾನ್‌ಸ್ಟೆಬಲ್ ರಾಘವೇಂದ್ರ ಹಾಗೂ ಕಾನ್‌ಸ್ಟೆಬಲ್ ವೆಂಕಟೇಶ್ ವಿರುದ್ಧ ಹಲ್ಲೆ ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಿಸಿ, ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ…
ದಂಪತಿ ನಡುವಿನ ಜಗಳದ ಹಿನ್ನೆಲೆಯಲ್ಲಿ ಖಲೀಲುಲ್ಲಾ ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆತರಲಾಗಿತ್ತು. ಥಾಣೆಯಲ್ಲಿ ಸಿಬ್ಬಂದಿ ಹಲ್ಲೆ ನಡೆಸಿದ್ದರಿಂದಲೇ ಪತಿ ಮೃತಪಟ್ಟಿದ್ದಾರೆ ಎಂದು ಮೃತರ ಪತ್ನಿ ಸಾಹಿನಾಜ್ ಗಂಭೀರ ಆರೋಪ ಮಾಡಿದ್ದಾರೆ. ಅಸ್ವಸ್ಥಗೊಂಡ ಖಲೀಲುಲ್ಲಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ…
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಅವರ ಪ್ರಕಾರ, ನ್ಯಾಯಾಧೀಶರ ಸಮ್ಮುಖದಲ್ಲಿ ಪಂಚನಾಮೆ ನಡೆಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಹಾಗೂ ಹಲ್ಲೆಯ ಕುರಿತು ಸ್ಪಷ್ಟತೆ ಸಿಗಲಿದೆ…
ಈ ಘಟನೆ ತಿಳಿಯುತ್ತಿದ್ದಂತೆಯೇ ಠಾಣೆ ಮತ್ತು ಆಸ್ಪತ್ರೆ ಎದುರು ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜಿಸಲಾಯಿತು. ಐಜಿಪಿ ಪಿ.ಎಸ್. ಹರ್ಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…
ಲಾಕಪ್‌ನಲ್ಲಿ ವ್ಯಕ್ತಿಯ ಸಾವು, ಇಬ್ಬರು ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿರುವುದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ವರದಿ ಈಗ ನಿರ್ಣಾಯಕವಾಗಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

