ಬೆಂಗಳೂರಿನ ವೈಟ್‌ಫೀಲ್ಡ್ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಮದ್ಯದ ಅಮಲಿನಲ್ಲಿ ಸುಮಾರು 45 ನಿಮಿಷಗಳ ಕಾಲ ಏರ್‌ಗನ್‌ನಿಂದ ಫೈರಿಂಗ್ ನಡೆಸಿ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದ್ದ ಖಾಸಗಿ ಐಟಿ ಕಂಪನಿ ಉದ್ಯೋಗಿಯನ್ನು ಸೂರ್ಯನಗರ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಲಕ್ನೋ ಮೂಲದ ಅನುರಾಗ್ ತಿವಾರಿ (40) ಕಳೆದ ಎಂಟು ತಿಂಗಳಿನಿಂದ ಬಂಡಾಪುರ ಸಮೀಪದ ‘ಸಿಪಾನಿ ಅಪಾರ್ಟ್‌ಮೆಂಟ್’ನಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ವಾಸವಾಗಿದ್ದ. ಬುಧವಾರ ರಾತ್ರಿ ಮದ್ಯ ಸೇವಿಸಿದ ಬಳಿಕ ಫೋನ್‌ನಲ್ಲಿ ಜೋರಾಗಿ ಮಾತನಾಡುತ್ತಿದ್ದ ಆತ, ನಂತರ ಬಾಲ್ಕನಿಯಿಂದ ಏರ್‌ಗನ್‌ನಿಂದ ಸತತವಾಗಿ ಶೂಟ್ ಮಾಡಿದ್ದಾನೆ. ಆರೋಪಿ ಹೊಡೆದ ಪೆಲೆಟ್‌ಗಳು ಪಾರ್ಕಿಂಗ್‌ನಲ್ಲಿದ್ದ ವಾಹನಗಳು ಹಾಗೂ ಶೆಡ್‌ಗೆ ತಾಗಿ ಹಾನಿ ಉಂಟುಮಾಡಿದ್ದು, ಸ್ಥಳಕ್ಕೆ ಬಂದ ಭದ್ರತಾ ಸಿಬ್ಬಂದಿಯ ಮೇಲೆಯೂ ಫೈರ್ ಮಾಡಿದ್ದಾನೆ. ಮಾಹಿತಿ ಪಡೆದ ಸೂರ್ಯನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದು, ಏರ್‌ಗನ್ ಹಾಗೂ ಮೆಟಲ್ ಪೆಲೆಟ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

