ಚಿತ್ರದುರ್ಗ: ತಂದೆಯ ಸಾಲದ ವಿಚಾರ ಮುಂದಿಟ್ಟುಕೊಂಡು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿದ ಆರೋಪ ಕೇಳಿಬಂದಿದೆ. ಹೊಳಲ್ಕೆರೆ ತಾಲೂಕಿನ ಘಟನೆಗೆ ಸಂಬಂಧಿಸಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಪವನ್ ಹಾಗೂ ಆಕಾಶ್ ಕಡೆಮನೆ ವಿರುದ್ಧ ಚಿತ್ರಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ವಿದ್ಯಾರ್ಥಿನಿಗೆ ‘ನಿನ್ನ ತಂದೆ ಮೃತಪಟ್ಟಿದ್ದಾರೆ’ ಎಂದು ಸುಳ್ಳು ಹೇಳಿ ಕರೆದೊಯ್ಯಲು ಆರೋಪಿಗಳು ಯತ್ನಿಸಿದ್ದಾರೆ ಎನ್ನಲಾಗಿದೆ. ಶಿಕ್ಷಕರಿಗೂ ಕರೆ ಮಾಡಿ ವಿದ್ಯಾರ್ಥಿನಿಯನ್ನು ಕಳುಹಿಸುವಂತೆ ಒತ್ತಡ ಹೇರಿದ್ದರೂ, ಅನುಮಾನಗೊಂಡ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯ ಸಮಯಪ್ರಜ್ಞೆಯಿಂದ ಯತ್ನ ವಿಫಲವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಘಟನೆಯ ಬಳಿಕ ವಿದ್ಯಾರ್ಥಿನಿ ಭಯಭೀತಳಾಗಿದ್ದು, ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾಳೆ ಎನ್ನಲಾಗಿದೆ. ಪ್ರಕರಣ ಸಂಬಂಧ ಚಿತ್ರಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

