ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚೌಡಿಹಾಳದಲ್ಲಿ ನಿವೃತ್ತ ಶಿಕ್ಷಕ ಸಿದ್ದಪ್ಪ ಅಂಜುಟಗಿ (62) ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಅನೈತಿಕ ಸಂಬಂಧಕ್ಕೆ ತಂದೆ ವಿರೋಧಿಸಿದ್ದಕ್ಕೆ ಪುತ್ರಿ ಪ್ರಿಯಾಂಕಾ ಸುರೇಶ ಮಸಳಿ (35) ತನ್ನ ಪ್ರಿಯಕರ ಸಂತೋಷ ಸಿಂಧೆ (32) ಜೊತೆ ಸೇರಿ ತಂದೆಯನ್ನು ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ. ಆಸ್ತಿ ವಿಚಾರವಾಗಿ ತಂದೆ-ಮಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆಗಸ್ಟ್ 15ರಂದು ಮತ್ತೆ ಗಲಾಟೆ ನಡೆದ ಬಳಿಕ ಪ್ರಿಯಾಂಕಾ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಸಂತೋಷ ಹಾಗೂ ಆತನ ಸ್ನೇಹಿತ ಗುರುರಾಜ ಸೇರಿ ಸಿದ್ದಪ್ಪ ಅವರನ್ನು ಉಸಿರುಗಟ್ಟಿಸಿ, ಬಳಿಕ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿ ಮೃತದೇಹವನ್ನು ರಸ್ತೆ ಬದಿಯಲ್ಲಿ ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಹಾಗೂ ಸಂತೋಷನನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ಗುರುರಾಜ ಬಿರಾದಾರ್ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆಸ್ತಿ ವಿವಾದ ಹಾಗೂ ಸಂಬಂಧಕ್ಕೆ ತಂದೆಯ ವಿರೋಧವೇ ಕೊಲೆಗೆ ಪ್ರಮುಖ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

