ಹನಗೋಡು ತಾಲೂಕಿನ ಹೆಬ್ಬಾಳ ಹಾಗೂ ನೇರಳಕುಪ್ಪೆ ಗ್ರಾಮಗಳ ದೇವಾಲಯಗಳಲ್ಲಿ ಮಧ್ಯರಾತ್ರಿ ಕಳ್ಳತನಕ್ಕೆ ಯತ್ನಿಸಿದ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೈಸೂರಿನ ಕೆಸರೆ ಬಡಾವಣೆಯ ಮಹಮ್ಮದ್ ಅನಾಸ್ ಅದಿಲ್ ಹಾಗೂ ಡೇನಿಯಲ್ ಬಂಧಿತರು. ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳು ಹೆಬ್ಬಾಳ ಗ್ರಾಮದ ಓಂಕಾರೇಶ್ವರ ದೇವಾಲಯದ ಬೀಗ ಒಡೆದು ಹುಂಡಿಯ ಹಣ ಹಾಗೂ ಪೂಜಾ ಸಾಮಗ್ರಿಗಳನ್ನು ಕದ್ದಿದ್ದರು. ಬಳಿಕ ನೇರಳಕುಪ್ಪೆ ಗ್ರಾಮದ ಮಹಾಲಕ್ಷ್ಮೀ ದೇವಾಲಯದ ಬೀಗ ಒಡೆಯಲು ಯತ್ನಿಸಿದಾಗ ಶಬ್ದ ಕೇಳಿ ಪಕ್ಕದ ಮನೆಯ ಯುವಕರು ಸ್ಥಳಕ್ಕೆ ಧಾವಿಸಿದ್ದಾರೆ. ಇಬ್ಬರು ಆರೋಪಿಗಳು ತೋಟದೊಳಗೆ ಪರಾರಿಯಾಗಿದ್ದು, ಕಾರಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಮತ್ತಿಬ್ಬರನ್ನು ಗ್ರಾಮಸ್ಥರು ಟ್ರ್ಯಾಕ್ಟರ್ ಮೂಲಕ ಕಾರಿಗೆ ಅಡ್ಡಗಟ್ಟಿ ಹಿಡಿದಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಹುಣಸೂರು ಗ್ರಾಮಾಂತರ ಪೊಲೀಸರು ಇಬ್ಬರನ್ನು ಬಂಧಿಸಿ, ಕಾರು ಹಾಗೂ ಕಳವು ಮಾಡಿದ್ದ ಪೂಜಾ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಮತ್ತಿಬ್ಬರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಬುಧವಾರ ಆರೋಪಿಗಳನ್ನು ದೇವಾಲಯಗಳಿಗೆ ಕರೆದೊಯ್ದು ಮಹಜರು ನಡೆಸಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

