ಮಂಡ್ಯ: ಪ್ರಕೃತಿಯ ಜೊತೆಯಲ್ಲಿ ಅವಿನಾಭಾವ ಸಂಬಂಧ ಹೊಂದಿರುವ ಮಾನವರಾದ ನಾವು ಪರಿಸರದ ಮೇಲೆ ದೌರ್ಜನ್ಯ ನಡೆಸಿ ಮರಗಿಡಗಳನ್ನು ಕಡಿದು ಕಾಡನ್ನು ನಾಶಮಾಡುತ್ತಿದ್ದೇವೆ. ಗಿಡಗಳನ್ನು ಮಕ್ಕಳಂತೆ ಬೆಳೆಸಿ ಕಾಪಾಡೋಣ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ವಿಭಾಗದ ನಿರ್ದೇಶಕ ಗಂಗಾಧರ ರೈ ಕರೆ ನೀಡಿದರು.ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಮ್ಮಿಕೊಳ್ಳಲಾದ ಪರಿಸರ ಜಾಗೃತಿ ಜಾಥಾ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಪ್ರಕೃತಿಯ ಮಡಿಲಿನಲ್ಲಿ ವಾಸಮಾಡುತ್ತಿರುವ ಪ್ರತಿಯೊಬ್ಬರೂ ಗಿಡಮರಗಳನ್ನು ನೆಟ್ಟು ಪೋಷಿಸಿ ಬೆಳೆಸುವ ಸಂಕಲ್ಪ ಮಾಡಬೇಕು. ಗಿಡಮರಗಳನ್ನು ಮಕ್ಕಳಂತೆ ಪ್ರೀತಿಸಿ ಪೋಷಿಸುವ ಪಣತೊಡಬೇಕು ಎಂದರು.ಮುಂದುವರೆದು ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಹುಟ್ಟು ಹಬ್ಬಗಳಿಗೆ ಗಿಡಮರಗಳನ್ನು ನೆಟ್ಟು ನೀರುಣಿಸಿ ಬೆಳೆಸುವ ಶಪಥ ಮಾಡಬೇಕು ಎಂದು ಗಂಗಾಧರ ರೈ ಮನವಿ ಮಾಡಿದರು.ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮುಖ್ಯರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿದ ಮಹಿಳೆಯರು ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪರಿಸರ ಜಾಗೃತಿ ಮೂಡಿಸುವ ಜೊತೆಗೆ ಘೋಷಣೆಯನ್ನು ಕೂಗಿ ಪರಿಸರ ಪ್ರೇಮವನ್ನು ಮೆರೆದರು.ಈ ಸಂದರ್ಭದಲ್ಲಿ ಕೆ.ಆರ್.ಪೇಟೆ ತಾಲೂಕು ವಲಯ ಅರಣ್ಯಾಧಿಕಾರಿ ಮಧುಸೂದನ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ನಾರಾಯಣಸ್ವಾಮಿ, ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ವಿನಯಕುಮಾರ್ ಸುವರ್ಣ, ತಾಲೂಕು ಸಂಯೋಜಕಿ ಮಮತಾಶೆಟ್ಟಿ, ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಹಜಮುಲ್ ಷರೀಫ್, ಎನ್.ಎಸ್.ಎಸ್ ಯೋಜನಾಧಿಕಾರಿ ಆಶಾ, ಪುರಸಭೆಯ ಮುಖ್ಯಾಧಿಕಾರಿ ಸತೀಶ್, ಜಿಲ್ಲಾ ಜನಜಾಗೃತಿ ಹೋರಾಟ ಸಮಿತಿಯ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರ, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ, ಕೃಷಿ ಅಧಿಕಾರಿ ನಿಂಗಪ್ಪ ಅಗಸರ್ ಸೇರಿದಂತೆ ಪ್ರಗತಿಬಂಧು ಮಹಿಳಾ ಸಂಘಟನೆಗಳ ಕಾರ್ಯಕರ್ತೆಯರು, ಸೇವಾ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





