ಬೆಂಗಳೂರು: ಇಸ್ಪೀಟ್ ಆಟದಲ್ಲಿ ರಹಸ್ಯ ಕ್ಯಾಮೆರಾ, ಸ್ಕ್ಯಾನರ್ ಹಾಗೂ ಇಯರ್‌ಬಡ್ಸ್ ಬಳಸಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಬಿಹಾರ ಮೂಲದ ಅಬು ತಲಾ, ಚಿಕ್ಕಮಗಳೂರಿನ ತಬ್ರೇಜ್ ಅಹಮದ್ ಹಾಗೂ ಶಿವಮೊಗ್ಗದ ಮೂವರು ಸೇರಿ ಐವರನ್ನು ಬಂಧಿಸಲಾಗಿದೆ. ಆರೋಪಿಗಳು ದೆಹಲಿಯಿಂದ ಡಿಜಿಟಲ್ ಸ್ಕ್ಯಾನ್ ಮಾಡಬಹುದಾದ ಇಸ್ಪೀಟ್ ಕಾರ್ಡ್‌ಗಳನ್ನು ತರಿಸಿಕೊಂಡು, ಮೊಬೈಲ್, ಕಾರಿನ ಕೀ, ಸ್ಮಾರ್ಟ್‌ವಾಚ್ ಹಾಗೂ ಕಣ್ಣಿನ ಲೆನ್ಸ್‌ನಂತೆ ಕಾಣುವ ರಹಸ್ಯ ಸಾಧನಗಳನ್ನು ಬಳಸುತ್ತಿದ್ದರು. ಕಾರ್ಡ್‌ಗಳ ಮಾಹಿತಿ ಪಡೆದು ಇಯರ್‌ಬಡ್ಸ್ ಮೂಲಕ ತಿಳಿದುಕೊಂಡು, ಆರಂಭದಲ್ಲಿ ಉದ್ದೇಶಪೂರ್ವಕವಾಗಿ ಸೋತು ಬಳಿಕ ಭಾರಿ ಮೊತ್ತದ ಬಾಜಿ ಕಟ್ಟಿ ಗೆಲ್ಲುತ್ತಿದ್ದರು. ಬಂಧಿತರಿಂದ ₹50 ಲಕ್ಷ ಮೌಲ್ಯದ ಡಿಜಿಟಲ್ ಇಸ್ಪೀಟ್ ಕಾರ್ಡ್‌ಗಳು, ರಹಸ್ಯ ಎಲೆಕ್ಟ್ರಾನಿಕ್ ಸಾಧನಗಳು, ಕಾರು, ಆಟೋ, ಮೂರು ದ್ವಿಚಕ್ರ ವಾಹನಗಳು ಹಾಗೂ 7 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಚಾಮುಂಡಿನಗರದ ಮನೆಯೊಂದರಲ್ಲಿ ಸಾಧನಗಳನ್ನು ಬಚ್ಚಿಟ್ಟಿದ್ದ ವೇಳೆ ಸಿಸಿಬಿ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

