ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಎಂ.ಎಸ್. ನಗರ ಅಗ್ರಹಾರ ಲೇಔಟ್‌ನ ಖಾಲಿ ನಿವೇಶನದಲ್ಲಿ ಎಸೆದಿದ್ದ ಆರೋಪದ ಮೇಲೆ ಸಂಪಿಗೆಹಳ್ಳಿ ಪೊಲೀಸರು ಸಾಗರ್ ಚಂದ್ರ ರಾವತ್ (32) ಎಂಬಾತನನ್ನು ಬಂಧಿಸಿದ್ದಾರೆ. ಹಣಕಾಸಿನ ವಿಚಾರಕ್ಕೆ ದಂಪತಿ ನಡುವೆ ಗಲಾಟೆ ನಡೆದಿದ್ದು, ಆಗಸ್ಟ್ 11ರಂದು ಅನಸೂಯ (28) ಅವರನ್ನು ಕೊಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲೆ ಬಳಿಕ ಮೂರು ದಿನ ಮೃತದೇಹದ ಜೊತೆಯಲ್ಲೇ ಇದ್ದ ಆರೋಪಿ, ಬೆಡ್‌ಶೀಟ್‌ನಲ್ಲಿ ಸುತ್ತಿ ಖಾಲಿ ನಿವೇಶನಕ್ಕೆ ಎಸೆದಿದ್ದ. ಸುಮಾರು 20 ದಿನಗಳ ಬಳಿಕ ನಿವೇಶನ ಸ್ವಚ್ಛಗೊಳಿಸುವ ವೇಳೆ ಮೃತದೇಹ ಪತ್ತೆಯಾಗಿತ್ತು. ಶವ ಗುರುತು ಪತ್ತೆಯಾಗದಷ್ಟು ಕೊಳೆತಿದ್ದರೂ, ಬಟ್ಟೆಯ ಮೇಲಿದ್ದ ಬಾರ್‌ಕೋಡ್ ಆಧರಿಸಿ ಒಡಿಶಾದ ಭುವನೇಶ್ವರದ ಬಟ್ಟೆ ಅಂಗಡಿಯ ಸುಳಿವು ಪಡೆದು ಮೃತೆಯನ್ನು ಗುರುತಿಸಲಾಯಿತು. ಪತ್ನಿಯ ಸಿಮ್ ಕಾರ್ಡ್‌ನ್ನು ಬಳಸುತ್ತಿದ್ದ ಆರೋಪಿ, ಹೋಟೆಲ್‌ನಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಹೋಟೆಲ್ ವ್ಯವಸ್ಥಾಪಕರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
