Breaking News

ಕೃಷಿ ಮೇಳ ಕೇವಲ ಯಂತ್ರೋಪಕರಣಗಳ ಪ್ರದರ್ಶನವಾಗಬಾರದು..! ರೈತರಿಗೆ ಜ್ಞಾನ ನೀಡುವ ಪ್ರಾತ್ಯಕ್ಷಿಕೆಗಳಿಗೆ ಆದ್ಯತೆ ಸಿಗಲಿ…

ಪಾರಂಪರಿಕ ಕೃಷಿ ಜೊತೆ ವೈಜ್ಞಾನಿಕ ಕೃಷಿಯೂ ಬರಲಿ..! ರೈತರಿಗೆ ನೇರವಾಗಿ ಉಪಯೋಗವಾಗುವ ಕೃಷಿ ಮೇಳ ಬೇಕು: ಡಿಸಿಪಿ ರವೀಶ್

ಕೃಷಿ ಮೇಳಕ್ಕೆ ಹೊಸ ರೂಪ ಬೇಕು: ಡಿಸಿಪಿ ರವೀಶ್.. ಯಂತ್ರೋಪಕರಣಗಳ ಪ್ರದರ್ಶನಕ್ಕಿಂತ ರೈತರಿಗೆ ಪ್ರಾತ್ಯಕ್ಷಿಕೆ ಮುಖ್ಯ..ಪಾರಂಪರಿಕ ಕೃಷಿ ಜೊತೆ ವೈಜ್ಞಾನಿಕ ಕೃಷಿಗೂ ಆದ್ಯತೆ ನೀಡಲು ಸಲಹೆ..

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಕುರಿತು ಡಿಸಿಪಿ ರವೀಶ್ ಸಿ.ಆರ್. ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೃಷಿ ಮೇಳ ಉತ್ತಮವಾಗಿ ನಡೆಯುತ್ತಿದ್ದು, ರೈತರು ಶಾಂತಿಪ್ರಿಯರು. ಖುಷಿಯಿಂದ ಕೃಷಿ ಮೇಳಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಿದರು….

ಆದರೆ ಕೃಷಿ ಮೇಳ ಇನ್ನಷ್ಟು ಪರಿಣಾಮಕಾರಿಯಾಗಬೇಕು ಎನ್ನುವುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದಿರುವ ಡಿಸಿಪಿ ರವೀಶ್, ಕೇವಲ ಟ್ರ್ಯಾಕ್ಟರ್, ಕೃಷಿ ಯಂತ್ರೋಪಕರಣಗಳು ಮತ್ತು ಕಂಪನಿಗಳ ಉತ್ಪನ್ನಗಳ ಪ್ರದರ್ಶನಕ್ಕೆ ಕೃಷಿ ಮೇಳ ಸೀಮಿತವಾಗಬಾರದು ಎಂದು ಸಲಹೆ ನೀಡಿದ್ದಾರೆ…

ಭತ್ತ, ಜೋಳ, ಮೆಕ್ಕೆಜೋಳ, ಹತ್ತಿ, ಕಡಲೆ, ಶೇಂಗಾ ಸೇರಿದಂತೆ ಈ ಭಾಗದಲ್ಲಿ ಬೆಳೆಯುವ ಬೆಳೆಗಳ ನೇರ ಪ್ರಾತ್ಯಕ್ಷಿಕೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಬೇಕು. ಯಾವ ಜಮೀನಿನಲ್ಲಿ ಯಾವ ಬೆಳೆ ಬೆಳೆಯಬೇಕು, ಯಾವ ಪದ್ಧತಿ ಅನುಸರಿಸಬೇಕು, ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಕೃಷಿ ವಿಜ್ಞಾನಿಗಳು ಹಾಗೂ ತಜ್ಞರು ರೈತರಿಗೆ ನೇರವಾಗಿ ತೋರಿಸಬೇಕು ಎಂದು ಹೇಳಿದ್ದಾರೆ…

ಇಂದಿನ ದಿನಗಳಲ್ಲಿ ಕೃಷಿ ಉಪಕರಣಗಳು ಆನ್‌ಲೈನ್‌ನಲ್ಲೇ ಸಿಗುತ್ತವೆ. ಹೀಗಾಗಿ ಕೃಷಿ ಮೇಳವು ಕೇವಲ ಉಪಕರಣಗಳನ್ನು ನೋಡುವ ಸ್ಥಳವಾಗದೆ, ರೈತರಿಗೆ ಶಿಕ್ಷಣ, ಜ್ಞಾನ ಮತ್ತು ಕೃಷಿಗೆ ನೇರವಾಗಿ ನೆರವಾಗುವ ವೇದಿಕೆಯಾಗಬೇಕು ಎಂಬುದು ತಮ್ಮ ವೈಯಕ್ತಿಕ ನಿಲುವು ಎಂದು ಡಿಸಿಪಿ ರವೀಶ್ ತಿಳಿಸಿದ್ದಾರೆ…

ಹೊಸ ಚಿಗುರು, ಹಳೆ ಬೇರು ಜೊತೆಗಿರಲು ಮರ ಸೊಬಗು” ಎಂಬಂತೆ ಪಾರಂಪರಿಕ ಕೃಷಿಯ ಜ್ಞಾನ ಹಾಗೂ ಆಧುನಿಕ ವೈಜ್ಞಾನಿಕ ತಂತ್ರಜ್ಞಾನ ಎರಡೂ ಜೊತೆಗೂಡಬೇಕು. ಪಾರಂಪರಿಕ ಕೃಷಿ ಬಲವಾದ ಬೇರು ಇದ್ದಂತೆ, ವೈಜ್ಞಾನಿಕ ಕೃಷಿ ಹೊಸ ಚಿಗುರಿನಂತೆ. ಎರಡೂ ಸೇರಿದಾಗ ಮಾತ್ರ ರೈತನಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ವಿವರಿಸಿದ್ದಾರೆ…

ರೈತ ನಮಗೆ ಅನ್ನ ನೀಡುವ ಶಕ್ತಿ. “ನೇಗಿಲ ಕುಲದೊಳಗಿದೆ ಕರ್ಮ, ನೇಗಿಲ ಮೇಲೆ ನಿಂತಿದೆ ಧರ್ಮ” ಎಂಬ ಮಾತಿನಂತೆ ರೈತನ ಕಾಯಕವನ್ನು ಗೌರವಿಸಬೇಕು. ರೈತನಿಗೆ ಅಧಿಕಾರ ಚಲಾಯಿಸುವುದಕ್ಕಿಂತ ರೈತನಿಗಾಗಿ ಸೇವೆ ಮಾಡುವ ಮನೋಭಾವ ಸಮಾಜದಲ್ಲಿರಬೇಕು ಎಂದು ಡಿಸಿಪಿ ರವೀಶ್ ಹೇಳಿದ್ದಾರೆ…

ರೈತ ಬದುಕಬೇಕು, ರೈತ ಬೆಳೆಯಬೇಕು, ರೈತ ಖುಷಿಯಾಗಿರಬೇಕು. ರೈತ ಉಳಿದರೆ ಮಾತ್ರ ಜಗತ್ತು ಉಳಿಯುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿರುವ ಅವರು, ಕೃಷಿ ಮೇಳಗಳು ಇನ್ನಷ್ಟು ಅಭಿವೃದ್ಧಿಯಾಗಬೇಕು ಮತ್ತು ರೈತರಿಗೆ ನೇರವಾಗಿ ಉಪಯೋಗವಾಗುವಂತಹ ಹೆಚ್ಚಿನ ಪ್ರಾತ್ಯಕ್ಷಿಕೆಗಳಿಗೆ ಆದ್ಯತೆ ಸಿಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Share News

About Shaikh BigTv

Check Also

ಯುವತಿಯರನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ ಆರೋಪ

ಬಾಗಲಕೋಟೆ: ಯುವತಿಯರನ್ನು ಚುಡಾಯಿಸುತ್ತಿದ್ದುದನ್ನು ಪ್ರಶ್ನಿಸಿದ ಕಾರಣಕ್ಕೆ ಯುವಕನೊಬ್ಬನ ಮೇಲೆ ಕೆಲ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೆರೂರು ಪಟ್ಟಣದಲ್ಲಿ …

Leave a Reply

Your email address will not be published. Required fields are marked *