ಯಾದಗಿರಿ: ಸ್ವಂತ ಮೊಮ್ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದಡಿ 75 ವರ್ಷದ ಅಜ್ಜನ ವಿರುದ್ಧ ಪೋಕ್ಸೋ ಸೇರಿದಂತೆ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. ಸುರಪುರ ತಾಲೂಕಿನ ಗ್ರಾಮವೊಂದರಲ್ಲಿ ಸೆ.23ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶರಣಪ್ಪ ಟಣಕೇದಾರ್ ಎಂಬಾತ ಬಾಲಕಿಗೆ ಚೂರಿ ತೋರಿಸಿ ಬೆದರಿಸಿ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಬಟ್ಟೆ ಬಿಚ್ಚಿಸಿ ಬಾಯಿಗೆ ಬಟ್ಟೆ ತುರುಕಿ ಕೊಲೆಗೆ ಯತ್ನಿಸಿದ ಆರೋಪವೂ ಕೇಳಿಬಂದಿದೆ. ಘಟನೆ ಗಮನಿಸಿದ ವ್ಯಕ್ತಿಯೊಬ್ಬರು 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ತಾಯಿ ಬೆಂಗಳೂರಿಗೆ ತೆರಳಿದ್ದ ವೇಳೆ ಬಾಲಕಿಯನ್ನು ಅಜ್ಜ-ಅಜ್ಜಿಯ ಮನೆಯಲ್ಲಿ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಬಾಲಕಿಯ ಹೊಟ್ಟೆ ಭಾಗದಲ್ಲಿ ಗಾಯವಾಗಿದ್ದು, ಚಿಕಿತ್ಸೆ ಹಾಗೂ ರಕ್ಷಣೆಯ ಹಿನ್ನೆಲೆಯಲ್ಲಿ ಬಾಲಮಂದಿರಕ್ಕೆ ರವಾನಿಸಲಾಗಿದೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ 115(2), 109(1) ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
