ಬಾಗಲಕೋಟೆ: ಭ್ರೂಣ ಹತ್ಯೆ ಹಾಗೂ ಅಕ್ರಮ ಭ್ರೂಣ ಲಿಂಗ ಪತ್ತೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ಕವಿತಾ ಬಾಡನವರ, ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮತ್ತೆ ಇದೇ ದಂಧೆಯಲ್ಲಿ ತೊಡಗಿರುವ ಶಂಕೆ ವ್ಯಕ್ತವಾಗಿದೆ. 2022 ಮತ್ತು 2024ರ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದ ಕವಿತಾ, ಕಳೆದ ಜೂನ್‌ನಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಸೆ.27ರಂದು ಚಿಮ್ಮಡ ಗ್ರಾಮದ ಮಧ್ಯವರ್ತಿ ಆನಂದ, ಮಹಾರಾಷ್ಟ್ರ ಮೂಲದ ಗರ್ಭಿಣಿಯೊಬ್ಬರಿಗೆ ಲಿಂಗ ಪರೀಕ್ಷೆ ಹಾಗೂ ಗರ್ಭಪಾತ ಮಾಡಿಸಿ ಕರೆದೊಯ್ಯುತ್ತಿದ್ದ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಆರೋಗ್ಯ ಇಲಾಖೆ ತನಿಖೆ ಆರಂಭಿಸಿದೆ. ಕವಿತಾ ಮತ್ತೆ ಅಕ್ರಮ ದಂಧೆಯಲ್ಲಿ ತೊಡಗಿರುವ ಶಂಕೆಯಿಂದ ಡಿಎಚ್‌ಒ ಡಾ. ಸುಮಿತ್ರಾ ಕುಲಕರ್ಣಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸರೊಂದಿಗೆ ಆಕೆಯ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ ಮನೆಗೆ ಬೀಗ ಹಾಕಿದ್ದರಿಂದ, ಪರಿಶೀಲನೆಗೆ ಸಹಕರಿಸುವಂತೆ ಸೂಚಿಸಿ ಅಧಿಕಾರಿಗಳು ಬಾಗಿಲಿಗೆ ನೋಟಿಸ್ ಅಂಟಿಸಿ ವಾಪಸಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

