ಆಸ್ತಿ ವ್ಯಾಜ್ಯದಲ್ಲಿ ಪೊಲೀಸರ ಆಟಕ್ಕೆ ಕಡಿವಾಣ..! ಸುತ್ತೋಲೆ ಉಲ್ಲಂಘಿಸಿದರೆ ಅಧಿಕಾರಿಗಳೇ ನೇರ ಹೊಣೆ — ಇಲಾಖೆಯ ಖಡಕ್ ವಾರ್ನಿಂಗ್..!
ಸಿವಿಲ್ ವ್ಯಾಜ್ಯದಲ್ಲಿ ಖಾಕಿ ಹಸ್ತಕ್ಷೇಪಕ್ಕೆ ಬ್ರೇಕ್..! ಹೈಕೋರ್ಟ್ ಆಕ್ಷೇಪದ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್..!
ಜಮೀನು, ಆಸ್ತಿ ವಿವಾದಗಳಲ್ಲಿ ಅಧಿಕಾರ ಮೀರಿದರೆ ಶಿಸ್ತು ಕ್ರಮ ಫಿಕ್ಸ್..! ಸುತ್ತೋಲೆ ಉಲ್ಲಂಘಿಸಿದ ಅಧಿಕಾರಿಗಳೇ ನೇರ ಹೊಣೆ..!
ವ್ಯಾಜ್ಯದಲ್ಲಿ ಸಿವಿಲ್ ವ್ಯಾಜ್ಯಗಳ ನೆಪದಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಹಸ್ತಕ್ಷೇಪ ಮಾಡುತ್ತಿದ್ದಾರಾ? ಸಿವಿಲ್ ವಿವಾದಗಳನ್ನು ಕಾನೂನುಬದ್ಧವಾಗಿ ಬಗೆಹರಿಸಬೇಕಾದ ಪೊಲೀಸರೇ ಕೆಲವೊಮ್ಮೆ ವಿವಾದಗಳ ಮಧ್ಯೆ ಪ್ರವೇಶಿಸುತ್ತಿರುವ ಆರೋಪಗಳಿಗೆ ಈಗ ಗಂಭೀರ ಎಚ್ಚರಿಕೆ ರವಾನೆಯಾಗಿದೆ…

ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರ ಹಸ್ತಕ್ಷೇಪದ ಬಗ್ಗೆ ಘನ ಉಚ್ಚ ನ್ಯಾಯಾಲಯವೇ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆಯೊಳಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ..
ಸಿವಿಲ್ ವಿವಾದಗಳ ದೂರುಗಳನ್ನು ಹೇಗೆ ನಿರ್ವಹಿಸಬೇಕು..? ಯಾವ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಬಹುದು? ಯಾವ ವಿಚಾರಗಳಲ್ಲಿ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ನಡೆದುಕೊಳ್ಳಬಾರದು? ಎಂಬುದರ ಕುರಿತು ಪೊಲೀಸ್ ಪ್ರಧಾನ ಕಚೇರಿ 14-11-2018ರಂದು ಸುತ್ತೋಲೆ ಹೊರಡಿಸಿತ್ತು. ಅಲ್ಲದೆ, ಈ ಹಿಂದೆ 01-08-2008ರಂದು ಕೂಡ ಮಾರ್ಗಸೂಚಿಗಳನ್ನು ನೀಡಲಾಗಿತ್ತು. ಆದರೂ ಕೆಲವು ಪೊಲೀಸ್ ಠಾಣೆಗಳಲ್ಲಿ ಸಿವಿಲ್ ವ್ಯಾಜ್ಯಗಳಲ್ಲಿ ಅಧಿಕಾರಿಗಳು ತಮ್ಮ ವ್ಯಾಪ್ತಿ ಮೀರಿ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪ್ರತಿಕೂಲ ಆದೇಶಗಳನ್ನು ಹೊರಡಿಸಿರುವುದಾಗಿ ಜ್ಞಾಪನದಲ್ಲಿ ಉಲ್ಲೇಖಿಸಲಾಗಿದೆ….
ಹೈಕೋರ್ಟ್ ಆಕ್ಷೇಪದ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ!ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಸಂಬಂಧಿಸಿದ RFA No. 406/2022 ಹಾಗೂ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ಸಂಬಂಧಿಸಿದ W.P. No. 569/2021 ಪ್ರಕರಣಗಳನ್ನು ಉದಾಹರಣೆಯಾಗಿ ಉಲ್ಲೇಖಿಸಲಾಗಿದೆ. ಮೇಲಾಧಿಕಾರಿಗಳು ಹಲವು ವರ್ಷಗಳ ಹಿಂದೆಯೇ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದ್ದರೂ, ಅವುಗಳ ಪಾಲನೆಯಲ್ಲಿ ಲೋಪವಾಗುತ್ತಿರುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ….
ನಗರದ ಎಲ್ಲಾ ವಿಭಾಗಗಳ ಉಪ ಪೊಲೀಸ್ ಆಯುಕ್ತರು ತಮ್ಮ ವ್ಯಾಪ್ತಿಯ ಠಾಣಾಧಿಕಾರಿಗಳಿಗೆ ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಬೇಕು. ಠಾಣಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಿಯಮಗಳ ಬಗ್ಗೆ ಸ್ಪಷ್ಟ ಅರಿವು ಮೂಡಿಸಲು ವಿಭಾಗೀಯ ಮಟ್ಟದಲ್ಲಿ ಕಾರ್ಯಾಗಾರಗಳನ್ನೂ ಆಯೋಜಿಸಬೇಕು ಎಂದು ಜ್ಞಾಪನದಲ್ಲಿ ತಿಳಿಸಲಾಗಿದೆ….
ಸುತ್ತೋಲೆ ಉಲ್ಲಂಘಿಸಿದರೆ ಅಧಿಕಾರಿಗಳೇ ಹೊಣೆ!ಇದು ಕೇವಲ ಸಲಹೆಯಲ್ಲ; ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೀಡಿರುವ ಎಚ್ಚರಿಕೆ. ಸೂಚನೆಗಳನ್ನು ಉಲ್ಲಂಘಿಸಿ ಅಧಿಕಾರ ವ್ಯಾಪ್ತಿ ಮೀರಿ ನಡೆದುಕೊಂಡರೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ….
ಸಿವಿಲ್ ವ್ಯಾಜ್ಯಗಳಲ್ಲಿ ಕಾನೂನಿನ ಮಿತಿಯೊಳಗೆ ಕಾರ್ಯನಿರ್ವಹಿಸುವುದು ಪೊಲೀಸರ ಕರ್ತವ್ಯ. ಆಸ್ತಿ ಮತ್ತು ಇತರ ನಾಗರಿಕ ವಿವಾದಗಳನ್ನು ಕಾನೂನುಬದ್ಧವಾಗಿ ಬಗೆಹರಿಸುವ ಬದಲು ಅಧಿಕಾರದ ಪ್ರಭಾವ ಬಳಸಿ ಹಸ್ತಕ್ಷೇಪ ಮಾಡುವ ಆರೋಪಗಳಿಗೆ ಅವಕಾಶ ಇರಬಾರದು ಎಂಬ ಸಂದೇಶವನ್ನು ಈ ಜ್ಞಾಪನ ನೀಡಿದೆ….
ಈಗ ಪ್ರಶ್ನೆ ಒಂದೇ — ಸುತ್ತೋಲೆಗಳು ಕಾಗದದಲ್ಲೇ ಉಳಿಯುತ್ತವೆಯೇ, ಅಥವಾ ಠಾಣೆಗಳಲ್ಲಿ ನಿಜವಾಗಿಯೂ ಪಾಲನೆಯಾಗುತ್ತವೆಯೇ…?
ಪೊಲೀಸ್ ಇಲಾಖೆ ನೀಡಿರುವ ಈ ಎಚ್ಚರಿಕೆ ಎಷ್ಟರ ಮಟ್ಟಿಗೆ ಜಾರಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
