ಮಂಡ್ಯದ ಕೆ.ಆರ್.ಪೇಟೆ ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವ ಹೇಮಗಿರಿಯ ಹೇಮಾವತಿ ನದಿ ದಡದಲ್ಲಿ ಪಂಪ್ ಹೌಸ್ ಗೆ ಎಕ್ಸ್ ಪ್ರೆಸ್ ಲೈನಿನ ಮೂಲಕ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡಲಾಗಿದೆಯಾದರೂ ಇದೇ ವಿದ್ಯುತ್ ಲೈನಿಗೆ ಎಂಟತ್ತು ಗ್ರಾಮಗಳ ವಿದ್ಯುತ್ ಸರಬರಾಜು ಲೈನುಗಳನ್ನೂ ಅಕ್ರಮವಾಗಿ ಸಂಪರ್ಕ ನೀಡಿರುವುದರಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.180 ಹೆಚ್.ಪಿ ಸಾಮರ್ಥ್ಯದ ಮೋಟಾರ್ ಸಮರ್ಪಕವಾಗಿ ನದಿಯಿಂದ ನೀರೆತ್ತಲು ಸಾಧ್ಯವಾಗುತ್ತಿಲ್ಲ. ಎಕ್ಸ್ ಪ್ರೆಸ್ ವಿದ್ಯುತ್ ಲೈನಿಗೆ ಅಳವಡಿಸಿರುವ ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಿದ ನಂತರವಷ್ಠೇ ಕೆ.ಆರ್.ಪೇಟೆ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ. ಇದಕ್ಕೆ ಕನಿಷ್ಠ 3 ತಿಂಗಳ ಕಾಲಾವಕಾಶ ಬೇಕು ಎಂದು ಸೆಸ್ಕ್ ಎಇಇ ರಾಜಶೇಖರ ಮೂರ್ತಿ ತಿಳಿಸಿದಾಗ ಕೆಂಡಾಮಂಡಲರಾದ ಶಾಸಕರು ಕುಡಿಯುವ ನೀರಿನ ವಿಚಾರದಲ್ಲಿ ಆಟ ಆಡ್ತೀರಾ. ನಿನಗ್ಯಾರು ಉತ್ತರ ಹೇಳಲು ಅವಕಾಶ ನೀಡಿದವರು. ಸಭೆಯಿಂದ ಹೊರಕ್ಕೆ ಹೋಗು, ಇಲ್ಲ ಕೂತ್ಕೋ. ನೀನು ನನ್ನ ಮತ ಕ್ಷೇತ್ರದಲ್ಲಿ ಕೆಲಸ ಮಾಡೋದು ಬೇಕಾಗಿಲ್ಲ. ಒಂದು ವಾರದ ಒಳಗೆ ಕುಡಿಯುವ ನೀರಿನ ವಿದ್ಯುತ್ ಸರಬರಾಜಿಗಾಗಿ ಇರುವ ಎಕ್ಸ್ ಪ್ರೆಸ್ ವಿದ್ಯುತ್ ಲೈನಿನಿಂದ ಪಡೆದಿರುವ ಎಲ್ಲಾ ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಿ ಪಂಪ್ ಹೌಸಿಗೆ ಗುಣಮಟ್ಟವು ವಿದ್ಯುತ್ ಸರಬರಾಜಾಗುವಂತೆ ಕ್ರಮಕೈಗೊಳ್ಳಿ ಎಂದು ಸ್ಥಳದಲ್ಲಿದ್ದ ಎಕ್ಸಿಕ್ಯುಟಿವ್ ಎಂಜಿನಿಯರ್ ನಾಗರಾಜು ಮತ್ತು ಎಇಇ ಕೃಷ್ಣ ಅವರಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಪಟ್ಟಣದ ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಪುರಸಭೆಯ ಕೆಲಸ ಕಾರ್ಯಗಳ ಬಗ್ಗೆ ಗಮನ ಹರಿಸುವಂತೆ ಶಾಸಕರು ಸೂಚನೆ ನೀಡಿದರು. ಪುರಸಭೆಮುಖ್ಯಾಧಿಕಾರಿ ಅಶೋಕ್, ಕುಡಿಯುವ ನೀರು ವಿಭಾಗದ ಸಹಾಯಕ ಎಂಜಿನಿಯರ್ ಸೌಮ್ಯ, ಪುರಸಭೆಯ ಹಿರಿಯ ಸದಸ್ಯ ಹೆಚ್.ಆರ್.ಲೋಕೇಶ್, ಹೆಚ್.ಡಿ.ಅಶೋಕ, ಶಾಮಿಯಾನ ತಿಮ್ಮೇಗೌಡ, ಬಸ್ ಸಂತೋಷ್, ಮಹಾದೇವಿ, ಶೋಭಾದಿನೇಶ್, ಶುಭಾಗಿರೀಶ್, ಇಂದ್ರಾಣಿ, ಪದ್ಮಾ, ಗಾಯಿತ್ರಮ್ಮ, ಪ್ರಮೋದ್ ಕುಮಾರ್, ಬಿ.ಜಿ.ಗಿರೀಶ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





