ಬೆಂಗಳೂರು: ಗಂಡನ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬಳು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ನಲ್ಲಸಂದ್ರದಲ್ಲಿ ಸೋಮವಾರ ಸಂಜೆ ನಡೆದಿದೆ.ಗೀತಾ(30) ಮೃತಪಟ್ಟ ಮಹಿಳೆ. ವೃತ್ತಿಯಲ್ಲಿ ಬಿಎಂಟಿಸಿ ಡ್ರೈವರ್ ಆಗಿರುವ ಭೀಮಣ್ಣ 14 ವರ್ಷಗಳ ಹಿಂದೆ ಗೀತಾಳನ್ನು ವರಿಸಿದ್ದ. ಮೂಲತಃ ಬೀದರ್ನವರಾಗಿದ್ದ ದಂಪತಿ, 5 ವರ್ಷಗಳ ಹಿಂದೆ ನಗರದ ನಲ್ಲಸಂದ್ರದಲ್ಲಿ ವಾಸವಿದ್ದರು.ಕಳೆದ ಮೂರು ದಿನಗಳ ಹಿಂದೆ ಪತಿ ಭೀಮಣ್ಣ, ಗೀತಾಳಿಗೆ ಹಲ್ಲೆ ಮಾಡಿದ್ದ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಗೀತಾ ಗಂಡನ ಮನೆ ತೊರೆದು ತಮ್ಮನ ಮನೆಗೆ ಬಂದಿದ್ದಳು. ಘಟನೆಯಿಂದ ಮನನೊಂದು ತಮ್ಮನ ಮನೆಯಲ್ಲಿಯೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗೀತಾಳ ಸಾವಿಗೆ ಗಂಡನ ಕಿರುಕುಳವೇ ಕಾರಣ ಎಂದು ಆಕೆಯ ಪಾಲಕರು ಆರೋಪಿಸಿದ್ದಾರೆ.ಘಟನೆ ಸಂಬಂಧ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





