ಚಾಮರಾಜನಗರ: ಪ್ರತಿವರ್ಷ ಆಷಾಢ ಬಂತೆಂದರೆ ಅದು ನವದಂಪತಿಗಳ ಪಾಲಿಗೆ ವಿರಹವೇದನೆ ಅನುಭವಿಸುವ ಕಾಲ. ಹೀಗೆ ಹೊಸದಾಗಿ ಮದುವೆಯಾದ ದಂಪತಿಗಳನ್ನು ಒಂದುಗೂಡಿಸುತ್ತಿದ್ದುದೇ ಚಾಮರಾಜನಗರದ ಚಾಮರಾಜೇಶ್ವರ ರಥೋತ್ಸವ. ದುರಾದೃಷ್ಟವಶಾತ್ ಕಳೆದ ವರ್ಷದಂತೆ ಇಂದೂ ಸಹ ತೇರು ಜರುಗದೇ, ನವದಂಪತಿಗಳು ನಿರಾಸೆ ಅನುಭವಿಸಿದರು. ಹಾಗಾದ್ರೆ ಆಷಾಢ ರಥೋತ್ಸವ ಯಾಕೆ ನಡೆಯಲಿಲ್ಲ ಅಂತೀರಾ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್….
ಚಾಮರಾಜೇಶ್ವರ ದೇವಸ್ಥಾನದ ಇತಿಹಾಸವೇ ಅಂತಾದ್ದು. 1836 ರಲ್ಲಿ ತಮ್ಮ ತಂದೆ ಚಾಮರಾಜ ಒಡೆಯರ್ ನೆನಪಿನಾರ್ಥ ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ದೇಗುಲ ನಿರ್ಮಿಸಿ, ಚಾಮರಾಜೇಶ್ವರ ಎಂದು ಹೆಸರಿಟ್ಟರು. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ರಾಜ್ಯದ ಯಾವುದೇ ಮೂಲೆಯಲ್ಲೂ, ಯಾವ ದೇವರಿಗೂ ರಥೋತ್ಸವ ನಡೆಯುವುದಿಲ್ಲ. ಆದ್ರೆ ಚಾಮರಾಜೇಶ್ವರನಿಗೆ ಮಾತ್ರ ಪ್ರತಿವರ್ಷದ ಆಷಾಢ ಮಾಸದಲ್ಲಿ ರಥೋತ್ಸವ ನಡೆಯುತ್ತಾ ಬಂದಿದೆ. ಆದರೆ ಕಳೆದ ಎರಡು ವರ್ಷಗಳಿಂದ ಇಲ್ಲಿಯೂ ರಥೋತ್ಸವ ನಡೆಯದಿರುವುದು ಭಕ್ತರಿಗೆ ಭಾರಿ ನಿರಾಸೆ ತಂದಿದೆ.
ಹೌದು. ಎರಡು ಶತಮಾನಗಳಿಂದಲೂ ಇಲ್ಲಿ ಆಷಾಢ ಜಾತ್ರೆ ನಡೆದುಕೊಂಡು ಬಂದಿದೆ. ರಾಜ್ಯದ ಮೂಲೆ ಮೂಲೆಗಳಿಂದ ನವಜೋಡಿಗಳು ಬರ್ತಾರೆ. ಆಷಾಢ ಮಾಸದಲ್ಲಿ ನವದಂಪತಿಗಳು ಜೊತೆಗಿರಬಾರದು ಅನ್ನೋ ನಂಬಿಕೆ ಹಿಂದೂ ಸಂಪ್ರದಾಯದಲ್ಲಿರೋದ್ರಿಂದ ಒಂದು ತಿಂಗಳ ಕಾಲ ಹೊಸ ಜೋಡಿಗಳು ದೂರವೇ ಇರ್ತಾರೆ. ಈ ವಿರಹ ವೇದನೆಯನ್ನು ಬ್ರೇಕ್ ಮಾಡೋಕೆ ಚಾಮರಾಜೇಶ್ವರ ಆಷಾಢ ರಥೋತ್ಸವ ವೇದಿಕೆಯಾಗ್ತಿತ್ತು. ಆದ್ರೆ ಕಳೆದ 2 ವರ್ಷಗಳ ಹಿಂದೆ ಕಿಡಿಗೇಡಿಯೊಬ್ಬ ರಥಕ್ಕೆ ಬೆಂಕಿ ಇಟ್ಟಿದ್ದರಿಂದ ಅಂದಿನಿಂದ ತೇರು ನಡೆಯುತ್ತಿಲ್ಲ. ನವಜೋಡಿಗಳು ಬರೀ ಪೂಜೆಯನ್ನಷ್ಟೇ ಸಲ್ಲಿಸಿ ಹೋಗ್ತಿದ್ದಾರೆಯೇ ಹೊರತು, ತೇರಿಗೆ ಹಣ್ಣು-ಧವನ ಎಸೆದು ಸಂತಾನಭಾಗ್ಯ ಕೊಡು ಎಂದು ಬೇಡುವಂತಿಲ್ಲವಾಗಿದೆ.
ಒಂದು ಕಡೆ ಶಿಥಿಲಗೊಂಡಿರೋ ತೇರು, ಮತ್ತೊಂದು ಕಡೆ ಜೀರ್ಣೋದ್ಧಾರವಾಗುತ್ತಿರುವ ದೇವಸ್ಥಾನ. ಇದರಿಂದಾಗಿ ಮುಂದಿನ ಎರಡರಿಂದ ಮೂರು ವರ್ಷಗಳವರೆಗೆ ಚಾಮರಾಜೇಶ್ವರ ರಥೋತ್ಸವ ನಡೆಯುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ಇನ್ನಾದ್ರೂ ಜಿಲ್ಲಾಡಳಿತ ಇತ್ತ ಗಮನಹರಿಸಿ ಆದಷ್ಟು ಬೇಗ ತೇರು ದುರಸ್ಥಿ ಮತ್ತು ದೇಗುಲ ಜೀರ್ಣೋದ್ಧಾರ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





