ಹುಬ್ಬಳ್ಳಿ: ಸುಗಮ ಸಂಚಾರ ಹಾಗೂ ಸುರಕ್ಷತೆಗಾಗಿ ಹು-ಧಾ ಸಂಚಾರ ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಸಹಯೋಗದಲ್ಲಿ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2023’ರ ಪ್ರಯುಕ್ತ ರಸ್ತೆ ಸುರಕ್ಷತಾ ಬೈಕ್ ರ್ಯಾಲಿ ನಡೆಸಲಾಯಿತು.

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2023ಕ್ಕೆ ನಗರ ಪೊಲೀಸ್ ಆಯುಕ್ತ ರಮನ್ ಗುಪ್ತಾ ಅವರು ಇಲ್ಲಿನ ರೈಲ್ವೆ ನಿಲ್ದಾಣ ಬಳಿ ರಸ್ತೆ ಸುರಕ್ಷತಾ ರ್ಯಾಲಿಗೆ ಚಾಲನೆ ನೀಡಿದರು. ಬೈಕ್ ರ್ಯಾಲಿಯಲ್ಲಿ ನಗರದ ವಿವಿಧ ಸಂಘ ಸಂಸ್ಥೆಗಳು, ಸಂಚಾರ ಪೊಲೀಸರು, ಭಾಗವಹಿಸಿದ್ದರು.

ರೈಲ್ವೆ ನಿಲ್ದಾಣದಿಂದ ಆರಂಭವಾದ ರ್ಯಾಲಿಯು ಸಿದ್ದಪ್ಪ ಕಂಬಳಿ ಮಾರ್ಗ ಮುಖಾಂತರ ಸಂಗೊಳ್ಳಿ ರಾಯಣ್ಣ ವೃತ್ತ, ಚೆನ್ನಮ್ಮ ವೃತ್ತ, ಗೋಕುಲರಸ್ತೆ ಮಾರ್ಗವಾಗಿ ತೋಳನಕೆರೆಗೆ ಅಂತ್ಯವಾಯಿತು. ಈ ರ್ಯಾಲಿಯಲ್ಲಿ ಸಾರ್ವಜನಿಕ ಜತೆಗೆ ಆಟೋರಿಕ್ಷಾ, ಕ್ಯಾಬ್, ಲಾರಿ, ಬಸ್ಸುಗಳ ಚಾಲಕರು ಹಾಗೂ ವಾಹನ ತರಬೇತಿ ಶಾಲೆಯ ಮುಖ್ಯಸ್ಥರು ಭಾಗವಹಿಸಿದ್ದರು.
ವಾಹನ ಚಾಲನೆ ವೇಳೆ ಸಂಚಾರ ನಿಯಮ ಪಾಲಿಸುವಂತೆ ಭಿತ್ತಿ ಫಲಕ ಪ್ರದರ್ಶಿಸಿ ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಸಾರಿಗೆ ಇಲಾಖೆ ಆಯುಕ್ತ ದಾಮೋದರ್, ಶಂಕ್ರಪ್ಪ, ಸಂಚಾರ ವಿಭಾಗದ ಡಿಸಿಪಿ ಗೋಪಾಲ್ ಬ್ಯಾಕೋಡ ಸೇರಿದಂತೆ ಹಲವು ಅಧಿಕಾರಿಗಳಿದ್ದರು.