ಬೆಳಗಾವಿ: ನಗರದಲ್ಲಿ ಪ್ರತಿಷ್ಠಿತ ಕಾಲೇಜ್ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ೨ ಪ್ರತ್ಯೆಕ ಜಾಲವನ್ನು ಪತ್ತೆ ಹಚ್ಚುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದು, ೮ ಜನರನ್ನು ಇಂದು ಬಂಧಿಸಿದ್ದಾರೆ.
ಟ್ರಕ್ ಚಾಲಕ ಅಖಿಲಅಹ್ಮದ್ ಕುತಬುದ್ದೀನ್ ಮುನವಳ್ಳಿ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರಗಳಿಂದ ಮಾದಕ ದ್ರವ್ಯ ತರುತ್ತಿದ್ದ. ಆತೀಪ್ ನಜೀರ್ ಅಹಮ್ಮದ್ ಚಚಡಿ ಹಾಗೂ ಸಲ್ಮಾನ್ ಪತ್ತೆ ಖಾನ್ ಮಾರಾಟ ಮಾಡುತ್ತಿದ್ದರು. ಸೂರಜ್ ಕಲ್ಲಪ್ಪ ಅಗಸರ್ ಹಾಗೂ ಅಮೀರ್ ಅಬ್ದುಲ್ ಲತೀಫ್ ಬೇಗ್ ಇವರು ಸಣ್ಣ ಸಣ್ಣ ಪ್ಯಾಕೆಟ್ ತಯಾರಿಸಿ ಬೆಳಗಾವಿಯ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ. ಅವರಲ್ಲಿದ್ದ ಒಂದೂವರೆ ಕೆಜಿ ಗಾಂಜಾ, ೪ ಮೊಬೈಲ್, ೨ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.
ಅದೇ ರೀತಿ ಮಾರ್ಕೆಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬೈಲಹೊಂಗಲ ತಾಲೂಕಿನ ಹನ್ನಿಕೇರಿಯಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಚವಾಟಗಲ್ಲಿಯ ಅನಿಕೇಶ ಅನಿಲ ಮಧುಮತ್ತ(೨೧), ವೀರಬಧ್ರನಗರದ ಸಮೀರ ಸಾಧೀಕ ದೇಸಾಯಿ(೨೨), ಮಾರುತಿ ನಗರದ ರಾಮಚಂದ್ರ ಪರಶುರಾಮ ಪವಾರ ಎಂಬುವವರನ್ನು ಬಂಧಿಸಿ ಅವರಲ್ಲಿದ್ದ ೬೫೦ ಗ್ರಾಮ ಗಾಂಜಾ, ಪನ್ನಿ ೧೨೬ ಚೀಟಿಗಳು, ಹೊಂಡಾ ಮೋಟರ್ ಸೈಕಲ್ ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಲೋಕೇಶ್ ಕುಮಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಡಿಸಿಪಿ ಸೀಮಾ ಲಾಟ್ಕರ್ ಮತ್ತು ಯಶೋಧಾ ವಂಟಗೋಡಿ ಮಾರ್ಗದರ್ಶನದಲ್ಲಿ, ಎಸಿಪಿ ಎನ್.ವಿ.ಬರಮನಿ ನೇತೃತ್ವದಲ್ಲಿ ಮಾಳಮಾರುತಿ ಇನಸ್ಪೆಕ್ಟರ್ ಬಿ.ಆರ್.ಗಡ್ಡೇಕರ್ ಮತ್ತು ಸಿಬ್ಬಂದಿ ಹಾಗೂ ಮಾರ್ಕೆಟ್ ಪೊಲೀಸ್ ಪಿಎಸ್ ಐ ವಿಠ್ಠಲ್ ಹಾವನ್ನವರ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





