ಹುಬ್ಬಳ್ಳಿ: ಅವಳಿನಗರದ ಮಧ್ಯೆ ಸಂಚರಿಸುತ್ತಿದ್ದ ಬೇಂದ್ರೆ ನಗರ ಸಾರಿಗೆ ಸಂಸ್ಥೆಯ ಬಸ್‍ಗಳ ಓಡಾಟ ಮತ್ತೆ ಆರಂಭಗೊಂಡಿದೆ. ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧಿಕರಣ (ಕೆಎಸ್‍ಟಿಎಟಿ) ಸೋಮವಾರ ಯಥಾಸ್ಥಿತಿ ಕಾಪಾಡುವಂತೆ ಆದೇಶ ಹೊರಡಿಸಿರುವುದರಿಂದ ಇಂದಿನಿಂದ ಮತ್ತೆ 41 ಬೇಂದ್ರೆ ಸಾರಿಗೆ ಸಂಸ್ಥೆಯ ಬಸ್‍ಗಳು ರೋಡಿಗೆ ಇಳಿದಿದ್ದು, ಬೇಂದ್ರೆ ಬಸ್ ಮಾಲೀಕರಿಗೆ ತಾತ್ಕಾಲಿಕ ನ್ಯಾಯ ಸಿಕ್ಕಂತಾಗಿದೆ.ಅವಳಿನಗರದ ಮಧ್ಯೆ ಬೇಂದ್ರೆ ಬಸ್‍ಗಳ ಸಂಚಾರಕ್ಕೆ ಪರವಾನಗಿ ನವೀಕರಣ ಕೋರಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ಜಿಲ್ಲಾಧಿಕಾರಿ ತೀರ್ಪು ಕಾಯ್ದಿರಿಸಿದ್ದರು. 2 ದಿನಗಳ ನಂತರ ತೀರ್ಪು ಪ್ರಕಟಿಸಿ, ತಾತ್ಕಾಲಿಕ ಪರವಾನಗಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಬೇಂದ್ರೆ ಸಾರಿಗೆ ಸಂಸ್ಥೆಯ ಎ.ಮಾಧವ ಸೇರಿ 13 ಮಾಲೀಕರು ಜು. 12ರಂದು ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧಿಕರಣದ ಮೊರೆ ಹೋಗಿದ್ದರು.ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧಿಕರಣ, ಜು. 31ರವರೆಗೆ ಬಸ್ ಸಂಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದೆ. ಇದರ ಅನ್ವಯ ಸಂಸ್ಥೆಯ 10 ಬಸ್‍ಗಳು ಸೋಮವಾರ ಸಂಜೆಯಿಂದಲೇ ರಸ್ತೆಗಿಳಿದಿವೆ. ಪರವಾನಗಿ ಹೊಂದಿರುವ 41 ಬಸ್‍ಗಳು ಇಂದು ಬೆಳಗ್ಗೆಯಿಂದ ಓಡುತ್ತಿವೆ. ನ್ಯಾಯಾಧಿಕರಣ ತೀರ್ಪಿನಿಂದ ತಾತ್ಕಾಲಿಕ ಪರಿಹಾರ ದೊರೆತಿದ್ದು, ಚಾಲಕ- ನಿರ್ವಾಹಕ ಹಾಗೂ ಸಿಬ್ಬಂದಿ ಸಮಸ್ಯೆಗಳನ್ನು ನ್ಯಾಯಾಧಿಕರಣ ಗಣನೆಗೆ ತೆಗೆದುಕೊಂಡಿದೆ ಎಂದು ಬೇಂದ್ರೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಧಾಕರ ಶೆಟ್ಟಿ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





