ಮಂಡ್ಯ: ಕೆ.ಆರ್.ಪೇಟೆ ಪಾಂಡುಪುರ ರೈತರ ಜೀವನಾಡಿಯಾಗಿ ಆತ್ಮೀಯ ಬಂಧುವಿನಂತೆ ಕೆಲಸ ಮಾಡುತ್ತಿರುವ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆ ಯು ಪ್ರಸಕ್ತ ಹಂಗಾಮಿನ ಕಬ್ಬು ಅರೆಯುವ ಕಾರ್ಯಕ್ಕೆ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ರವಿರೆಡ್ಡಿ ವಿಶೇಷ ಪೂಜೆ ಪುರಸ್ಕಾರ ಹಾಗೂ ಹೋಮಹವನವನ್ನು ನಡೆಸಿ ಅಧಿಕೃತವಾಗಿ ಚಾಲನೆ ನೀಡಿದರು…ಕಳೆದ ಸಾಲಿನಲ್ಲಿ ಏಳೂವರೆ ಲಕ್ಷ ಟನ್ ಕಬ್ಬು ಅರೆದು ಮಂಡ್ಯ ಜಿಲ್ಲೆಯಲ್ಲಿ ದಾಖಲೆ ನಿರ್ಮಾಣ ಮಾಡಿದ್ದ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಸಾಲಿನಲ್ಲಿ ಎಂಟು ಲಕ್ಷ ಟನ್ ಕಬ್ಬು ಅರೆಯುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ ರವಿರೆಡ್ಡಿ ಸರ್ಕಾರವು ನಿಗಧಿಪಡಿಸುವ ಕಬ್ಬಿನ ದರವನ್ನು ನೀಡಲು ಕಾರ್ಖಾನೆಯ ಆಡಳಿತ ಮಂಡಳಿಯು ಬದ್ಧವಾಗಿದ್ದು ಪ್ರತೀ ಟನ್ ಕಬ್ಬಿಗೆ ರೈತರಿಗೆ ಮುಂಗಡವಾಗಿ 2300ರೂಗಳನ್ನು ನೀಡಲು ನಿರ್ಧರಿಸಿದೆ. ಎಂದಿನಂತೆ ತಾಲ್ಲೂಕಿನ ಕಬ್ಬು ಬೆಳೆಗಾರರು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವ ಮೂಲಕ ಕಾರ್ಖಾನೆಯು ಮತ್ತಷ್ಟು ರೈತಸ್ನೇಹಿಯಾಗಿ ಕೆಲಸ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು…ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಕ್ಕರೆ ನೀತಿಯಿಂದಾಗಿ ಕಬ್ಬು ಬೆಳೆಗಾರರಿಗೆ ಕಾರ್ಖಾನೆಯು ಹೆಚ್ಚಿನ ಸಹಾಯ ಮಾಡಲು ಕಷ್ಟಕರವಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಮಾರಾಟಕ್ಕೆ ನಿರ್ಬಂಧ ವಿಧಿಸಿರುವುದರಿಂದ ಕಾರ್ಖಾನೆಯು ಎಥೆನಾಲ್ ಸೇರಿದಂತೆ ಇತರೆ ಉಪ ಉತ್ಪನ್ನಗಳನ್ನು ತಯಾರಿಸುವ ಘಟಕಗಳನ್ನು ಸ್ಥಾಪಿಸುವುದುಇಂದಿನ ಅನಿವಾರ್ಯತೆಯಾಗಿದೆ. ರೈತ ಬಾಂಧವರು ಹಾಗೂ ಕಬ್ಬು ಬೆಳೆಗಾರರು ಕಾರ್ಖಾನೆಯ ವಿಸ್ತರಣೆ ಹಾಗೂ ಉಪ ಉತ್ಪನ್ನಗಳ ತಯಾರಿಕಾ ಘಟಕಗಳ ಸ್ಥಾಪನೆಗೆ ಸಹಕಾರ ನೀಡಬೇಕು ಎಂದು ರವಿರೆಡ್ಡಿ ಮನವಿ ಮಾಡಿದರುಕಬ್ಬು ಕಟಾವು ಮಾಡುವ ಕಾರ್ಮಿಕರು ಹಾಗೂ ಕೆಲಸಗಾರರನ್ನು ಬಳ್ಳಾರಿ, ಬೆಳಗಾವಿ ಸೇರಿದಂತೆ ಇತರೆ ಭಾಗಗಳಿಂದ ಲಾರಿಗಳಲ್ಲಿ ಕರೆತರಲು ಸರ್ಕಾರವು ನಿರ್ಭಂದ ವಿಧಿಸಿರುವುದರಿಂದ ಕಬ್ಬು ಕಟಾವು ಮಾಡುವ ಕಾರ್ಮಿಕರು ತಾಲೂಕಿಗೆರೈಲುಗಳು ಮತ್ತು ಬಸ್ಸಿನಲ್ಲಿ ಆಗಮಿಸಬೇಕಾಗಿರುವುದರಿಂದ ಕಬ್ಬು ಕಟಾವು ಕಾರ್ಯ ನಿಧಾನವಾಗಿದ್ದು ಒಂದೆರಡು ದಿನಗಳಲ್ಲಿ ಎಂದಿನಂತೆ ಕಬ್ಬು ಕಟಾವು ಮತ್ತು ಕಬ್ಬು ಅರೆಯುವ ಕಾರ್ಯವು ಸುಗಮವಾಗಿ ನಡೆಯಲಿದೆ ಎಂದು ವಿವರಿಸಿದರು. ರವಿರೆಡ್ಡಿ, ತಾವು ಕಾರ್ಖಾನೆಗೆ ಆಗಮಿಸಿ ಒಂದು ವರ್ಷ ಒಂದು ತಿಂಗಳಾಗುತ್ತಿದ್ದು ತಮಗೆ ಕಬ್ಬು ಬೆಳೆಗಾರರು ನೀಡಿದ ಸಹಕಾರಕ್ಕೆ ಚಿರ ಋಣಿಗಳಾಗಿರುವುದಾಗಿ ತಿಳಿಸಿ ಧನ್ಯವಾದಗಳನ್ನು ಅರ್ಪಿಸಿದರು.ಕಾರ್ಯಕ್ರಮದಲ್ಲಿ ತಾಂತ್ರಿಕ ವಿಭಾಗದ ಮುಖ್ಯಸ್ಥ ಮೇಯನ್, ತಾಂತ್ರಿಕ ವಿಭಾಗದ ಸಹಾಯಕ ವ್ಯವಸ್ಥಾಪಕ ಶಿವರಾಮ್, ಸಂಸ್ಕರಣೆ ವಿಭಾಗದ ಮುಖ್ಯಸ್ಥರಾದ ಧರ್ಮಲಿಂಗಂ, ಚೀಫ್ ಮ್ಯಾನೇಜರ್ ಮೋಹನ್, ರಾಜಶೇಖರ, ಕಬ್ಬು ವಿಭಾಗದ ಹಿರಿಯ ವ್ಯವಸ್ಥಾಪಕ ಕೆ.ಬಾಬೂರಾಜ್, ಸಾರ್ವಜನಿಕ ಸಂಪರ್ಕಾಧಿಕಾರಿ ಚಟ್ಟಂಗೆರೆ ನಾಗೇಶ್, ಮಾಕವಳ್ಳಿ ಪುಟ್ಟೇಗೌಡ, ಕೆ.ದತ್ತಾತ್ರೇಯ, ಮಾಕವಳ್ಳಿ ಗ್ರಾ.ಪಂ ಅಧ್ಯಕ್ಷ ಬಲರಾಮೇಗೌಡ, ತಾಪಂ ಸದಸ್ಯ ನಾಟನಹಳ್ಳಿ ನಿಂಗೇಗೌಡ, ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಗೌರವಾಧ್ಯಕ್ಷ ಕೆ.ಜೆ.ಅಣ್ಣಯ್ಯ, ಪ್ರಗತಿಪರ ಕಬ್ಬು ಬೆಳೆಗಾರರಾದ ಮಂಜೇಗೌಡ, ಕೊಡಗಹಳ್ಳಿ ಜಯರಾಮೇಗೌಡ, ಬೂಕನಕೆರೆ ಹೆಳವೇಗೌಡ, ಕಿಕ್ಕೇರಿ ಪುಟ್ಟೇಗೌಡ ಸೇರಿದಂತೆ ನೂರಾರು ಕಬ್ಬು ಬೆಳೆಗಾರರು ಕಬ್ಬು ಅರೆಯುವಿಕೆ ಚಾಲನೆಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಕಬ್ಬು ಅರೆಯುವಿಕೆ ಕಾರ್ಯವನ್ನು ಆರಂಬಿಸಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದರೆ ಕಾರ್ಮಿಕರಲ್ಲಿ ಹಬ್ಬದ ವಾತಾವರಣ ನೆಲೆಸಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news





