ತಾಲೂಕಿನ ಮಲ್ಲಿಕಾರ್ಜುನ ಶಿರಗುಪ್ಪಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪ್ರಾರಂಭದಲ್ಲಿ, ಆತನು ಬೆಳೆಸಾಲದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬಸ್ಥರು ಭಾವಿಸಿದ್ದರು. ಆದರೆ, ಇದೀಗ ಮೊಬೈಲ್‌ನಲ್ಲಿ ಸಿಕ್ಕಿರುವ ಆಡಿಯೋ ಕ್ಲಿಪ್‌ನಲ್ಲಿ ಆತ್ಮಹತ್ಯೆಗೆ ಕಾರಣ ಫೈನಾನ್ಸ್ ಸಿಬ್ಬಂದಿಯ ಕಿರುಕುಳವಾಗಿದ್ದೇ ಎಂಬುದು ಬಯಲಾಗಿದೆ. ಮಲ್ಲಿಕಾರ್ಜುನ ಕಳೆದ ವರ್ಷ ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಮೂಲಕ ಬೈಕ್ ಖರೀದಿ ಮಾಡಿದ್ದರು. ಕಿಡ್ನಿ ಸಮಸ್ಯೆಯಿಂದಾಗಿ ಕಂತುಗಳನ್ನು ಪಾವತಿಸಲು ಸಾಧ್ಯವಾಗದೇ ಹೋಗಿತ್ತು. ಈ ಹಿನ್ನೆಲೆಯಲ್ಲಿ ಫೈನಾನ್ಸ್ ಸಿಬ್ಬಂದಿ ಪದೇಪದೇ ಕರೆ ಮಾಡಿ ಅವನಿಗೆ ಕಿರುಕುಳ ನೀಡುತ್ತಿದ್ದರೆಂಬುದು ಆಡಿಯೋ ಮೂಲಕ ಗೊತ್ತಾಗಿದೆ.ಆಡಿಯೋದಲ್ಲಿ ಫೈನಾನ್ಸ್ ಸಿಬ್ಬಂದಿಯೊಬ್ಬರು “ಸಾಲ ಕಟ್ಟಲು ಆಗದಿದ್ದರೆ ನೇಣು ಹಾಕಿಕೋ” ಎಂದು ಹೇಳಿದ್ದರೆಂದು ತಿಳಿದುಬಂದಿದೆ. ಮತ್ತೊಬ್ಬ ಸಿಬ್ಬಂದಿ “ಇನ್ನೂ ನೇಣು ಹಾಕಿಕೊಂಡಿಲ್ಲವಾ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿರುವ ಶಬ್ದವೂ ದಾಖಲಾಗಿದೆ.
ಇಂತಹ ನಿರಂತರ ಕಿರುಕುಳದಿಂದ ಬೇಸತ್ತು ಮಲ್ಲಿಕಾರ್ಜುನ ವಿಡಿಯೋ ಕಾಲ್ ಮೂಲಕನೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಈ ಪ್ರಕರಣದ ಆಡಿಯೋ ದಾಖಲೆ ಸಿಕ್ಕ ಬಳಿಕ ಮಲ್ಲಿಕಾರ್ಜುನ ತಾಯಿ ಗಿರೀಜಾ ಅವರು ಧಾರವಾಡ ಎಸ್‌ಪಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.”ನನ್ನ ಮಗನಿಗೆ ಫೈನಾನ್ಸ್ ನವರ ಕಿರುಕುಳವೇ ಸಾವಿಗೆ ಕಾರಣ. ಇಂತಹ ಘಟನೆ ಮತ್ತೊಬ್ಬರಿಗೂ ಆಗಬಾರದು” ಎಂದು ಕಣ್ಣೀರಿನಿಂದ ಮನವಿ ಮಾಡಿದ ಗಿರೀಜಾ ಅವರು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಈ ಘಟನೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

