ಚಾಮರಾಜನಗರ: ವರುಣ ದೇವನ ಮುನಿಸಿನಿಂದ ಸಕಾಲಕ್ಕೆ ಮಳೆ ಬಾರದೆ ರಾಜ್ಯ ಬರದಿಂದ ತತ್ತರಿಸಿದೆ. ಕೆರೆ-ಕಟ್ಟೆ, ಜಲಾಶಯಗಳು ಬರಿದಾಗಿ ಬಣಗುಡುತ್ತಿವೆ, ಜನ ಜಾನುವಾರುಗಳು ನೀರಿಲ್ಲದೆ ಪರಿತಪಿಸುವಂತಾಗಿದೆ. ಇತ್ತಾ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದ ಜೀವನಾಡಿ ಎಂದೇ ಕರೆಯುವ ಸುವರ್ಣಾವತಿ-ಚಿಕ್ಕಹೊಳೆ ಜಲಾಶಯಗಳು ನೀರಿಲ್ಲದೆ ಸೊರಗಿವೆ. ನಿಧಾನಗತಿಯಲ್ಲಿ ಆರಂಭವಾಗಿರುವ ಮುಂಗಾರಿನ ನಡುವೆ ಜಲಾಶಯಗಳು ಬತ್ತುತ್ತಿರುವುದೇಕೆ? ಅದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಒಂದು ಕಾಲಕ್ಕೆ ಚಾಮರಾಜನಗರ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸುತ್ತಿದ್ದ ಜಿಲ್ಲೆಯ ಜೀವನಾಡಿ ಎಂದೇ ಹೆಸರಾಗಿದ್ದ ಚಿಕ್ಕಹೊಳೆ-ಸುವರ್ಣಾವತಿ ಜಲಾಶಯಗಳು ಈಗ ನೀರಿನ ಒಳ ಹರಿವಿನ ಕೊರತೆಯಿಂದಾಗಿ ಬಣಗುಡುತ್ತಿವೆ. ಸುವರ್ಣಾವತಿ ಜಲಾಶಯದ ಒಟ್ಟು ನೀರಿನ ಮಟ್ಟ 2455 ಅಡಿಗಳು, ಅದರ ಕೆಪ್ಯಾಸಿಟಿ 1259.90. ಎಂಸಿಎಫ್ ಟಿ, ಚಿಕ್ಕಹೊಳೆ ಜಲಾಶಯದ ನೀರಿನ ಮಟ್ಟ 2479 ಅಡಿಗಳು, ಅದರ ಕೆಪ್ಯಾಸಿಟಿ 372 ಎಂಸಿಎಫ್ ಟಿ. ಇಲ್ಲಿಂದ ಹರಿಯುವ ನೀರು ಚಾಮರಾಜನಗರ, ಯಳಂದೂರು, ಕೊಳ್ಳೆಗಾಲ ಭಾಗದ 23 ಸಾವಿರ ಎಕರೆ ಪ್ರದೇಶಗಳಿಗೆ ನೀರು ಹರಿದು, ಲಕ್ಷಾಂತರ ಜನರಿಗೆ ಉಪಯೋಗವಾಗುತ್ತಿತ್ತು. ಒಳ ಹರಿವಿನ ಪ್ರಮಾಣ ಕಡಿಮೆ ಇರುವುದರಿಂದ ಎರಡು ಜಲಾಶ ಯಗಳು ಭರ್ತಿಯಾಗಿಲ್ಲ. ಇವೆರಡು ಜಲಾಶಯಗಳು ಭರ್ತಿಯಾಗಿದ್ದರೇ, ನವೆಂಬರ್ ಡಿಸೆಂಬರ್ ನಲ್ಲಿ ಬೆಳೆಗಳಿಗೆ ನೀರನ್ನ ಹರಿಸಲಾಗುತ್ತಿತ್ತು.
ಎರಡು ಜಲಾಶಯಗಳು ಕಾಡಂಚಿನಲ್ಲಿರುವುದರಿಂದ ನೀರಿನ ಹರಿವಿನ ಮೂಲ ಕಾಲುವೆಗಳು ಮತ್ತು ಕಾಡಿನಲ್ಲಿರುವ ಹಳ್ಳಕೊಳ್ಳಗಳು ಅವೆಲ್ಲವೂ ತುಂಬಿ ಹರಿದರೆ ಮಾತ್ರ ಜಲಾಶಯಕ್ಕೆ ನೀರು ಬರುತ್ತದೆ, ಅಲ್ಲದೆ ಕರ್ನಾಟಕಕ್ಕೆ ಹೊಂದಿಕೊಂಡಿರುವ ತಮಿಳುನಾಡು ಭಾಗದ ಕಾಡುಗಳಿಂದ ನೀರು ಹರಿದು ಬರುತ್ತಿತ್ತು. ಆದರೆ ಇತ್ತೀಚೆಗೆ ತಮಿಳುನಾಡು ಕಾಡುಗಳಲ್ಲಿನ ಕಾಲುವೆಗಳಿಗೆ ಚೆಕ್ ಡ್ಯಾಂ ನಿರ್ಮಾಣ ಮಾಡಿರುವುದರಿಂದ, ಚೆಕ್ ಡ್ಯಾಂ ಗಳಲ್ಲಿ ನೀರು ಶೇಖರಣೆಯಾದ ನಂತರ ಹೊರಬಂದರೆ ಮಾತ್ರ ಜಲಾಶಯವನ್ನ ಸೇರುತ್ತದೆ. ಈ ವೇಳಗಾಗಲೇ ಎರಡು ಜಲಾಶಯಗಳು ತುಂಬಿರಬೇಕಿತ್ತು. ತಮಿಳುನಾಡು-ಕರ್ನಾಟಕದ ಗಡಿ ಪ್ರದೇಶದ ತಾಳವಾಡಿ ಭಾಗದ ಗಾಜನೂರು, ಮುದಿಯನೂರು ಭಾಗದಲ್ಲಿ ಡ್ಯಾಂ ಗಳ ನಿರ್ಮಾಣ ಮಾಡುತ್ತಿರುವುದರಿಂದ ನೀರಿನ ಹರಿವಿನ ಮೂಲಗಳು ಬತ್ತಿವೆ.
ಚಾಮರಾಜನಗರ ಪಟ್ಟಣಕ್ಕೆ ಸಮಗ್ರ ಕುಡಿಯುವ ನೀರು ಪೂರೈಕೆಯಾಗುತ್ತಿದ್ದ ಸುವರ್ಣಾವತಿ ಮತ್ತು ಚಿಕ್ಕಹೊಳೆಗೆ ತಮಿಳುನಾಡಿನ ದಿಂಬಂ ಭಾಗದಿಂದ ನೀರು ಹರಿಯುತ್ತಿತ್ತು. ಜಲಾಶಯ ತುಂಬಿ ಈ ಭಾಗದ ಕೃಷಿ ಜಮೀನಿಗೆ ಅನುಕೂಲವಾಗಿದ್ದ ಈ ಜಲಾಶಯಗಳಿಗೆ ತಮಿಳುನಾಡು ಭಾಗದಿಂದ ನೀರು ಬರುವ ಹಾದಿಯಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಿದ್ದರಿಂದ ಜಲಾಶಯಗಳು ಭರ್ತಿಯಾಗಿಲ್ಲ. ಡ್ಯಾಂ ಗಳಲ್ಲಿ ನೀರಿಲ್ಲದಿರುವುದರಿಂದ ಜನ ಜಾನುವಾರುಗಳು ನೀರಿಲ್ಲದೆ ಪರಿತಪಿಸುವಂತಾಗಿದೆ. ಈ ವರ್ಷ ಮಳೆಯ ಪ್ರಮಾಣವೂ ಕಡಿಮೆಯಾಗಿ ಬೆಳೆಯಿಲ್ಲದೆ ಜೀವನ ದುಸ್ತರವಾಗಿದೆ. ವ್ಯವಸಾಯ ಮಾಡಲು ಕಷ್ಟವಾಗಿದೆ ಎನ್ನುತ್ತಾರೆ ಈ ಭಾಗದ ರೈತರು. ಒಟ್ಟಾರೆ ಚಾಮರಾಜನಗರದ ಜೀವನಾಡಿಯಾಗಿದ್ದ ಅವಳಿ ಜಲಾಶಯಗಳು ನೀರಿಲ್ಲದೆ ಬಣಗುಡುತ್ತಿರುವುದರಿಂದ, ಈ ಭಾಗದ ರೈತರು ಕಂಗಾಲಾಗಿದ್ದಾರೆ. ಮಳೆ ಗಾಲದ ನಂತರ ಬೆಳೆಗಳಿಗೆ ಆಸರೆಯಾಗಿದ್ದ ಈ ಜಲಾಶಯಗಳು ಬರಿದಾಗುತ್ತಿರುವುದನ್ನ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆಯೇ? ಎಂಬುದನ್ನ ಕಾದು ನೋಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





