Breaking News

ಅವಧಿ ಮುಗಿಯುವವರೆಗೂ ಮೂರು ಶಾಸಕರು ಅನರ್ಹರು. ಉಳಿದವರ ಕುರಿತು ಕೆಲವೇ ದಿನಗಳಲ್ಲಿ ತೀರ್ಮಾನ

ಬೆಂಗಳೂರು: ಮೂವರು ಶಾಸಕರು ವಿಧಾನಸಭೆಯ ಈ ಅವಧಿ ಮುಗಿಯುವವರೆಗೂ ಅನರ್ಹರು ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.ಸರ್ಕಾರ ಬಿದ್ದು ಹೋಗುತ್ತದೆ ಎಂಬುದು ಸ್ಪಷ್ವವಾದ ಕ್ಷಣದಿಂದ ಇದ್ದ ಕುತೂಹಲಗಳು ಎರಡು. ಒಂದು, ಸ್ಪೀಕರ್ ಅವರ ನಡೆ ಏನಾಗಿರುತ್ತದೆ ಎಂಬುದು, ಅಂದರೆ ಯಾವ್ಯಾವ ಶಾಸಕರನ್ನು ಅನರ್ಹಗೊಳಿಸುತ್ತಾರೆ ಎಂಬ ವಿಚಾರ. ಎರಡನೆಯದ್ದು ಯಡಿಯೂರಪ್ಪನವರು ಕೂಡಲೇ ಮುಖ್ಯಮಂತ್ರಿಯಾಗುತ್ತಾರಾ ಇಲ್ಲವಾ ಎಂಬುದುಇದೀಗ ಮೊದಲನೆಯ ವಿಚಾರಕ್ಕೆ ಪಾಕ್ಷಿಕವಾಗಿ ತೆರೆ ಬಿದ್ದಿದೆ. ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮೂವರು ಶಾಸಕರ ಅನರ್ಹತೆಯ ಕುರಿತಾದ ತಮ್ಮ ತೀರ್ಮಾನಗಳನ್ನು ವಿವರವಾಗಿ ಬಿಡಿಸಿಟ್ಟರು.ರಾಣಿಬೆನ್ನೂರಿನ ಶಾಸಕ ಶಂಕರ್ ಅವರು ಕೆಪಿಜೆಪಿಯಿಂದ ಆಯ್ಕೆಯಾಗಿದ್ದು, ಎರಡನೆಯ ಸಾರಿ ಮಂತ್ರಿಯಾದಾಗ ಕಾಂಗ್ರೆಸ್ ಪಕ್ಷದೊಂದಿಗೆ (ಜೂನ್ 14ರಂದು) ತನ್ನ ಪಕ್ಷವನ್ನು ವಿಲೀನ ಮಾಡಿದ್ದೇನೆಂದು ಸ್ಪೀಕರ್ ಅವರಿಗೆ ತಿಳಿಸಿದ್ದರು.ಆ ನಂತರ ತಾನು ಬಿಜೆಪಿಗೆ ಬೆಂಬಲಿಸುತ್ತಿದ್ದೇನೆಂದು ತಾನೇ ತಿಳಿಸಿರುವುದರಿಂದ ಸಂದೇಹಕ್ಕೆ ಆಸ್ಪದವಿಲ್ಲದೇ ಪಕ್ಷಾಂತರ ಮಾಡಿರುವುದರಿಂದ ಅವರು ಅನರ್ಹರು ಎಂದು ಘೋಷಿಸಲಾಗಿದೆ.ವಿಪ್ ಉಲ್ಲಂಘನೆ ಕಾರಣಕ್ಕೆ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಫೆಬ್ರವರಿಯಲ್ಲೇ ದೂರು ನೀಡಲಾಗಿತ್ತು. ಅವರು ಏನೇನು ಮಾಡಿದರೆಂಬುದನ್ನು ವಿವರಿಸಿ ಅವರನ್ನೂ ಅನರ್ಹರೆಂದು ಘೋಷಿಸಲಾಗಿದೆ.ಇನ್ನು ಉಳಿದ ಶಾಸಕರುಗಳ ರಾಜೀನಾಮೆ ಪ್ರಕರಣಗಳ ಕುರಿತು ತೀರ್ಮಾನ ಮಾಡಲು ತಾನಿನ್ನೂ ಅಧ್ಯಯನ ಮಾಡಬೇಕಿದೆ. ಹಲವಾರು ಕೋರ್ಟ್ ತೀರ್ಪುಗಳನ್ನು ನೋಡಬೇಕಿದೆ. ಅವರುಗಳ ರಾಜೀನಾಮೆಯ ಕುರಿತೂ ನನಗಿನ್ನೂ ಮನವರಿಕೆಯಾಗಿಲ್ಲ, ಅವರುಗಳ ರಾಜೀನಾಮೆಯು ಕ್ರಮಬದ್ಧವಾಗಿಲ್ಲ. ಆದರೆ ಅದರ ಕುರಿತು ತೀರ್ಪು ನೀಡಲು ಸಮಯ ಬೇಕಿದೆ ಎಂದರು.ಈ ತೀರ್ಮಾನ ಕೈಗೊಳ್ಳಲು ಕಾರಣವಾದ ನೈತಿಕ ಹಾಗೂ ಕಾನೂನಿನ ವಿಚಾರಗಳನ್ನೂ ರಮೇಶ್ ಕುಮಾರ್ ವಿವರಿಸಿದ್ದಲ್ಲದೇ, ಶಾಸಕರ ಅನೈತಿಕ ರೀತಿ-ನೀತಿಗಳ ಕುರಿತು ಖಾರವಾಗಿ ಮಾತನಾಡಿದರು.ಸುಪ್ರೀಂಕೋರ್ಟ್.ಗೆ ಹೋಗುವ ಸಾಧ್ಯತೆಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟಿಗೆ ಹೋಗುವ ಎಲ್ಲಾ ಸಾಧ್ಯತೆಗಳೂ ಇವೆ. ಅದನ್ನು ಗಮನದಲ್ಲಿಟ್ಟುಕೊಂಡೇ ರಮೇಶ್ ಕುಮಾರ್ ವಿವರಗಳನ್ನು ತಿಳಿಸಿದರು. ಈ ಮೂರೂ ಶಾಸಕರ ವಿಚಾರದಲ್ಲಿ ತಾಂತ್ರಿಕ ಅಂಶಗಳೂ ಸ್ಪಷ್ಟವಿದ್ದುದರಿಂದ ಸ್ಪಷ್ಟವಾದ ಕ್ರಮ ತೆಗೆದುಕೊಳ್ಳಲು ಹಿಂಜರಿದಿಲ್ಲ ಎಂಬುದು ಗೊತ್ತಾಗಿದೆ. ಅದರಲ್ಲೂ ಶಂಕರ್, ತಾನು ಕಾಂಗ್ರೆಸ್.ನಲ್ಲಿವಿಲೀನವಾಗಿದ್ದೆನೆಂದು ಹೇಳಿ ನಂತರ ಬಿಜೆಪಿಗೆ ಬೆಂಬಲ ಕೊಡುತ್ತೇನೆಂದು ಲಿಖಿತವಾಗಿ ತಿಳಿಸಿದ್ದರಿಂದ ಅವರನ್ನು ಅನರ್ಹಗೊಳಿಸಲು ಯಾವುದೇ ಅಡ್ಡಿಗಳಿರಲಿಲ್ಲ.ಆದರೂ ಸದರಿ ಶಾಸಕರು ಸುಪ್ರೀಂಕೋರ್ಟಿಗೆ ಹೋಗುವ ಎಲ್ಲಾ ಸಾಧ್ಯತೆಗಳೂ ಇವೆ.ಸ್ಪೀಕರ್ ಅವರು ವಹಿಸಿದ ಎಚ್ಚರಿಕೆಪ್ರತಿಯೊಬ್ಬರ ವಿಚಾರದಲ್ಲೂ ನಡೆದ ಘಟನಾವಳಿಗಳನ್ನು ದಿನಾಂಕವಾರು ವಿವರಿಸಿದ್ದಲ್ಲದೇ, ಅದು ಕಾನೂನು ಪ್ರಕಾರ ಹೇಗೆ ಸರಿ ಅಥವಾ ತಪ್ಪು ಎಂಬುದನ್ನೂ ಸ್ಪೀಕರ್ ಮುಂದಿಟ್ಟಿದ್ದಾರೆ. ಆ ಮೂಲಕ ತಾನು ಪಕ್ಷಪಾತದಿಂದ ವರ್ತಿಸಿಲ್ಲ, ಪಕ್ಷಾಂತರ ನಿಷೇಧ ಕಾಯ್ದೆಯನ್ವಯವೇ ಕ್ರಮ ತೆಗೆದುಕೊಂಡಿದ್ದೇನೆ ಎಂಬುದಕ್ಕೆ ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ತಾನು ತರಾತುರಿಯೂ ಮಾಡಲಿಲ್ಲ, ಕಾಯ್ದೆಯ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ತಡವೂ ಮಾಡಲಿಲ್ಲ ಎಂಬುದನ್ನೂ ವಿವರಿಸಿದರು.ತಾನು ರಾಜೀನಾಮೆ ಅಂಗೀಕಾರಕ್ಕೆ ತಡಮಾಡುತ್ತಿದ್ದೇನೆಂದು ಸುಪ್ರೀಂಕೋರ್ಟಿಗೆ ಸುಳ್ಳು ಹೇಳಿದರೆಂಬುದನ್ನು ಘಟನಾವಳಿಗಳ ಮೂಲಕ ಸ್ಪೀಕರ್ ಬಿಚ್ಚಿಟ್ಟರು. ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು ಅವರು ಶರದ್ ಯಾದವ್ ಅವರ ಪ್ರಕರಣದಲ್ಲಿ ನೀಡಿದ ತೀರ್ಪನ್ನೂ ಉಲ್ಲೇಖಿಸಿದರು.ಈ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭದಿಂದಲೂ ಸ್ಪೀಕರ್ ರಮೇಶ್ ಕುಮಾರ್ ಅವರು ಹಾಲಿ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಮತ್ತು ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮಕುಮಾರ್ ಅವರಿಂದ ಕಾನೂನು ಸಲಹೆಯನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ.

Share News

About admin

Check Also

ಡಿಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಉಸ್ತುವಾರಿ ನೇಮಕ…

ದೆಹಲಿ : ಸಂಘಟನಾ ಉಸ್ತುವಾರಿಯಾಗಿ ಚಂದ್ ರೆಡ್ಡಿ ಆಯ್ಕೆ… ಶೀಘ್ರವೇ ಕೈ ಅಧ್ಯಕ್ಷರ ಬದಲಾವಣೆ.. ಸಂಘಟನೆ ಚುರುಕುಗೊಳಿಸಿ 2028ರ ಚುನಾವಣೆ …

Leave a Reply

Your email address will not be published. Required fields are marked *