ಚಾಮರಾಜನಗರ: ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಆ ಅಭಯಾರಣ್ಯದಲ್ಲಿ ಇತ್ತೀಚೆಗೆ ಹುಲಿಗಳ ಸಾವು ಹೆಚ್ಚುತ್ತಿದೆ. ಇದು ಸಹಜವಾಗಿಯೇ ಪ್ರಾಣಿ ಪ್ರಿಯರಲ್ಲಿ ಆತಂಕ ಮೂಡಿಸಿದೆ. ದೇಶದ ಮೂಲೆ ಮೂಲೆಗಳಿಂದ ಹುಲಿ ನೋಡಲೇಂದೇ ಜನ ಆ ಉದ್ಯಾನವನಕ್ಕೆ ಬರುತ್ತಾರೆ. ಆದರೆ ಅಲ್ಲಿ ಹೆಚ್ಚಿದ ಹುಲಿಗಳ ಸಾವಿನಿಂದ ಅದರ ಸಂತತಿ ನಶಿಸಿ ಹೋಗುವುದೇ ಎನ್ನುವ ಪ್ರಶ್ನೆ ಈ ಅಭಯಾರಣ್ಯಲ್ಲಿದೆ.ಹೌದು, ದೇಶದಲ್ಲೇ ಅತಿ ಹೆಚ್ಚು ಹುಲಿ ಸಂರಕ್ಷಿತ ಯೋಜನೆಗಳನ್ನ ಒಳಗೊಂಡ ಜಿಲ್ಲೆ ಚಾಮರಾಜನಗರ ಜಿಲ್ಲೆಯ ಒಟ್ಟು ಭೂಪ್ರದೇಶದ ಶೇಕಡ 52 ರಷ್ಟು ಅರಣ್ಯ ಪ್ರದೇಶವನ್ನ ಹೊಂದಿದ್ದು, ಜಿಲ್ಲೆಯ ಬಂಡಿಪುರ, ಬಿಳಿಗಿರಿರಂಗನ ಬೆಟ್ಟ, ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶಗಳನ್ನ ಹೊಂದಿದೆ. ಬಂಡಿಪುರ ಅರಣ್ಯ ಪ್ರದೇಶವನ್ನ ರಾಷ್ಟ್ರೀಯ ಉದ್ಯಾನವನ್ನಾಗಿ ಮಾಡಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಣೆ ಮಾಡಲಾಗಿದೆ, ಬಂಡಿಪುರದಲ್ಲಿ 130 ಹುಲಿಗಳು, ಬಿಆರ್ ಟಿಯಲ್ಲಿ 35 ಹುಲಿಗಳು, ಮಹದೇಶ್ವರ ಅರಣ್ಯ ಪ್ರದೇಶದಲ್ಲಿ ಅಂದಾಜು 17 ಹುಲಿಗಳಿವೆ. ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ರಾಜ್ಯದ ವಿವಿಧ ಅಭಯಾರಣ್ಯಗಳಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 9 ಹುಲಿಗಳು ಮೃತ ಪಟ್ಟಿದ್ದು, ಈ ಪೈಕಿ ಎರಡು ಹುಲಿಗಳ ಸಾವು ವಿಷ ಪ್ರಾಶನದಿಂದ ಆಗಿರುವ ಕಾರಣ ವನ್ಯಜೀವಿ ಪ್ರೇಮಿಗಳಲ್ಲಿ ಸಹಜವಾಗಿಯೇ ಆತಂಕ ಮೂಡಿದೆ. ಇತ್ತೀಚೆಗೆ ರಾಷ್ಟ್ರೀಯ ಉದ್ಯಾನವನ ಬಂಡಿಪುರ ಅರಣ್ಯ ಪ್ರದೇಶದಲ್ಲಿ ನಾಲ್ಕು ತಿಂಗಳ ಅಂತರದಲ್ಲಿ ನಾಲ್ಕು ಹುಲಿಗಳ ಸಾವಾಗಿದೆ. ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯ ಮೂಲೆಹೊಳೆ ಅರಣ್ಯ ವಲಯದಲ್ಲಿ ಜೂ.19ರಂದು 7 ವರ್ಷದ ಹುಲಿ ಸಾವನ್ನಪ್ಪಿದೆ. ಇದರ ದೇಹದ ಮೇಲೆ ಗಾಯದ ಗುರುತುಗಳಿದ್ದು, ಎರಡು ಹುಲಿಗಳ ಕಾದಾಟದಿಂದ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಹುಲಿ ಮದ್ದೂರು ವಲಯದ ನಿಂಗಳ್ಳಿ ಕಾರೇಮಾಳದ ಸಾವನ್ನಪ್ಪಿದ್ದು, ಜುಲೈ ತಿಂಗಳ 10ರಂದು ಕಳೆಬರ ಪತ್ತೆಯಾಗಿತ್ತು. ಎರಡು ಹುಲಿಗಳ ಕಾದಾಟದಲ್ಲಿ ಗಾಯಗೊಂಡಿದ್ದ ಹುಲಿಯ ಚಲನವಲನದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ನಿಗಾ ಇಟ್ಟಿದ್ದರು. ಮತ್ತೊಂದು ಹುಲಿ ಗುಂಡ್ಲುಪೇಟೆ ಬಳಿಯ ಪಾರ್ವತಿ ಬೆಟ್ಟದ ಬಳಿ ಹುಲಿ ಕಳೆ ಬರ ಪತ್ತೆಯಾಗಿ ಅದು ವಿಷ ಪ್ರಾಶನದಿಂದಾಗಿ ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿತ್ತು. ಇಂದು ಮತ್ತೊಂದು ಹುಲಿ ಬಂಡಿಪುರ ವ್ಯಾಪ್ತಿಯ ಮೇಲುಕಾಮನ ಹಳ್ಳಿ ಬಳಿ ಸಾವನ್ನಪ್ಪಿದ್ದು, ಅದು ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಮೃತ ಪಟ್ಟಿದಿಯೇ ಅಥವಾ ಗಡಿ ಕಾದಾಟದಲ್ಲಿ ಸತ್ತಿದಿಯೇ ಎನ್ನುವುದು ಮರಣೋತ್ತರ ಪರೀಕ್ಷೆಯಿಂದಷ್ಟೆ ತಿಳಿದು ಬರಬೇಕಿದೆ. ಹುಲಿಗಳ ಸಾವಿಗೆ ಹಲವಾರು ಕಾರಣಗಳನ್ನ ಅರಣ್ಯ ಇಲಾಖೆ ಹೇಳಿದರೆ ವನ್ಯ ಜೀವಿ ಪ್ರೇಮಿಗಳು ಹೇಳುವುದೇ ಬೇರೆಯದ್ದಾಗಿದೆ. ಒಂದು ಅಥವಾ ಎರಡು ಹುಲಿಗಳು ಕಾದಾಟದಿಂದ ಗಾಯಗೊಂಡು ಸಾವನ್ನಪ್ಪಿದರೇ, ಕಾಡಿನಲ್ಲಿ ಆಹಾರವಿಲ್ಲದೆ ಕಾಡಂಚಿನ ಗ್ರಾಮಗಳಿಗೆ ನುಗ್ಗಿ ದನಗಳನ್ನ, ನಾಯಿಗಳನ್ನ, ಕುರಿ ಆಡು ಸೇರಿದಂತೆ ಸಾಕು ಪ್ರಾಣಿಗಳನ್ನ ತಿನ್ನುವುದು, ನೀರಿಗೆ ಬರವಿರುವುದರಿಂದ ನೀರನ್ನರಸಿ ಕಾಡಿನಂಚಿಗೆ ಪದೇ ಪದೇ ಬಂದು ಜನತೆಯಲ್ಲಿ ಆತಂಕ ಮೂಡಿಸುವುದರಿಂದ ಸಾಕು ಪ್ರಾಣಿಗಳ ಮೃತ ದೇಹಕ್ಕೆ ವಿಷ ಪ್ರಾಶನ ಮಾಡಿ ಅಥವಾ ಕೆರೆಯ ನೀರಿಗೆ ವಿಷ ಬೆರಸಿ ಕೊಲ್ಲುತ್ತಿರುವುದರಿಂದ ಸಹಜವಾಗಿ ಹುಲಿಗಳ ಸಾವು ಹೆಚ್ಚಾಗಿದೆ. ಇದರಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯವೂ ಅಡಗಿದೆ. ಈ ಹಿಂದಿನಂತೆ ಕಾಡಿನಲ್ಲೇಯೇ ದನಗಳ ದೊಡ್ಡಿಯನ್ನ ತೆರದಲ್ಲಿ ಹುಲಿಗಳು ಕಾಡಿನಿಂದ ಹೊರ ಬರಲು ಸಾಧ್ಯವಿಲ್ಲ ಎನ್ನುತ್ತಾರೆ ವನ್ಯ ಜೀವಿ ಸಂರಕ್ಷಣಾ ಸಮಿತಿ ಸದಸ್ಯ ನಾಗೇಂದ್ರ ಸ್ವಾಮಿ.ಒಟ್ಟಾರೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲೇ ಹುಲಿಗಳ ಸಾವು ಹೆಚ್ಚಾಗುತ್ತಿದ್ದು, ವನ್ಯ ಜೀವಿ ಪ್ರೇಮಿಗಳಿಗೆ ಸಹಜವಾಗಿ ಆತಂಕ ಮೂಡಿಸಿದೆ. ಹಾಗಾಗಿ ಹುಲಿಗಳ ಸಂರಕ್ಷಣೆ ಮಾಡುವ ವಿಷಯದಲ್ಲಿ ಸೂಕ್ತ ಕ್ರಮಗಳನ್ನ ಅರಣ್ಯ ಇಲಾಖೆ ಕೈಗೊಳ್ಳಬೇಕಿದೆ. ಹೆಚ್ಚಿದ ಹುಲಿಗಳ ಸಾವಿಗೆ ಕೇವಲ ಅರಣ್ಯ ಇಲಾಖೆಯತ್ತ ಬೊಟ್ಟು ಮಾಡುವ ಬದಲು, ಇಲಾಖಾ ಯೋಜನೆಗಳಿಗೆ ನಾಗರೀಕರು ಕೈಜೋಡಿಸುವ ಅಗತ್ಯವಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





