Breaking News

5 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

ಮಂಡ್ಯ: ಜಿಲ್ಲೆಯ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದ ತಾಲ್ಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನವು ಅದ್ದೂರಿಯಾಗಿ ವರ್ಣರಂಜಿತವಾಗಿ ನಡೆಯಿತು. ಸಮ್ಮೇಳನಾಧ್ಯಕ್ಷರಾದ ಸಾಹಿತಿ, ಜ್ಞಾನಬುತ್ತಿ ಸಂಸ್ಥೆಯ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ ಅವರನ್ನು ಬೆಳ್ಳಿ ಸಾರೋಟಿನಲ್ಲಿ ಜನಪದ‌ ಕಲಾತಂಡಗಳ ವರ್ಣರಂಜಿತ ಮೆರವಣಿಗೆಯ ಮೂಲಕ ವೇದಿಕೆಗೆ ಕರೆ ತರಲಾಯಿತು.
ಸಾಹಿತ್ಯ ಸಮ್ಮೇಳನಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು ಗ್ರಾಮೀಣ ಜನರ ಬದುಕು ಸೇರಿದಂತೆ ಕೃಷಿ ಸಮಸ್ಯೆಗಳನ್ನು ಅನಾವರಣಗೊಳಿಸಿ ಅನ್ನದಾತನಾದ ರೈತನು ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗಬೇಕು. ಕನ್ನಡದ ಧೀಶಕ್ತಿ, ಕನ್ನಡಿಗರ ಪ್ರೇರಕ ಶಕ್ತಿಯಾಗಬೇಕು,
ಕನ್ನಡ ಕರ್ನಾಟಕದಲ್ಲಿ ಸಾರ್ವಭೌಮ ಭಾಷೆಯಾಗಬೇಕು. ಅನ್ಯಭಾಷಿಕರು ಕನ್ನಡ ಭಾಷೆ, ನೆಲ ಜಲದ ಬಗ್ಗೆ ಅಭಿಮಾನ ಬೆಳೆಸಿಕೊಂಡು ಕನ್ನಡದ ನೆಲಕ್ಕೆ, ಸಂಸ್ಕೃತಿಗೆ ಗೌರವ ಕೊಡುವ ಮನೋಭಾವನೆಯನ್ನು ಬೆಳೆಸಿಕೊಳ್ಳುವ ದಿಕ್ಕಿನಲ್ಲಿ ಸಾಹಿತ್ಯ ಸಮ್ಮೇಳನಗಳು ಜಾಗೃತಿ ಮೂಡಿಸಲಿ ಎಂದು ಸಮ್ಮೇಳನಾಧ್ಯಕ್ಷ ಜೈನಹಳ್ಳಿ ಸತ್ಯನಾರಾಯಣಗೌಡ ಕರೆ ನೀಡಿದರು.
ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹರಟೆ ಖ್ಯಾತಿಯ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ ಕನ್ನಡ ಭಾಷೆಯು ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಭಾಷೆಯಾಗಿದೆ. ಕನ್ನಡ ಎಂದರೆ ಅವಿನಾಭಾವ ಸಂಬಂಧ, ಸ್ನೇಹ ಸೌಹಾರ್ದತೆ ಮೂಡುತ್ತದೆ. ಸಾಹಿತ್ಯ ಸಮ್ಮೇಳನದ ಮೂಲಕ ಹೃದಯ ಶ್ರೀಮಂತಿಕೆ, ಸೃಜನಶೀಲತೆ ಗಟ್ಡಿಯಾಗಬೇಕು. ಕನ್ನಡಿಗರು ಗಟ್ಟಿಧ್ವನಿಯಲ್ಲಿ ನಾಡು ನುಡಿಯ ಬಗ್ಗೆ ಹೋರಾಟ ನಡೆಸಬೇಕು.
ಸಾಲು ಮರದ ತಿಮ್ಮಕ್ಕ, ವಿಶ್ವದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿರುವ ವಿಲಿಯಂ ಶೇಕ್ಸ್‌ಪಿಯರ್‌ ಅವರ ಆದರ್ಶಗಳನ್ನು ಯುವಜನರು ಪಾಲಿಸಬೇಕು. ಕನ್ನಡ ಭಾಷೆಯನ್ನು ಕಟ್ಟುವ, ಕನ್ನಡ ಸಂಸ್ಕೃತಿಯನ್ನು ಪ್ರೀತಿಸುವ ಮನೋಭಾವನೆಯನ್ನು ಬೆಳೆಸಿಕೊಂಡು ಸಮಾಜಮುಖಿ ಯಾಗಿ ಮುನ್ನಡೆಯಬೇಕು ಎಂದು ಕೃಷ್ಣೇಗೌಡ ಕರೆ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ್ ಚಾಮಲಾಪುರ, ಜಿ.ಪಂ ಮಾಜಿಅಧ್ಯಕ್ಷೆ ಜೆ.ಪ್ರೇಮಕುಮಾರಿ, ಜಿಪಂ ಉಪಾಧ್ಯಕ್ಷೆ ಗಾಯತ್ರಿ, ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ಸದಸ್ಯರಾದ ರಾಮದಾಸು, ಬಿ.ಎಲ್.ದೇವರಾಜು, ಕೋಡಿಮಾರನಹಳ್ಳಿ ದೇವರಾಜು, ತಾಲ್ಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಕನ್ನಡಾಭಿಮಾನಿಗಳ ದಂಡೇ ನೆರೆದಿತ್ತು.
ಶಾಸಕ ನಾರಾಯಣಗೌಡರ ಗೈರು ಹಾಜರಿಯು ಸಮ್ಮೇಳನದಲ್ಲಿ ಎದ್ದು ಕಾಣುತ್ತಿತ್ತು
ಸ್ಥಳೀಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಸಮ್ಮೇಳನದಲ್ಲಿ ಭಾಗವಹಿಸಿದ್ದ ಅತಿಥಿಗಳು ಹಾಗೂ ಸಾಹಿತ್ಯಾಭಿಮಾನಿಗಳು ಮತ್ತು ವಿದ್ಯಾರ್ಥಿಗಳಿಗೆ ರುಚಿಯಾದ ಭೋಜನ ವ್ಯವಸ್ಥೆಯನ್ನು ಏರ್ಪಡಿಸಿತ್ತು.
ಅಕ್ಕಿಹೆಬ್ಬಾಳು ಗ್ರಾಮದ ಬಿ.ಜಯಶ್ರೀ ರಂಗಮಂದಿರ ಆವರಣದಲ್ಲಿ ನಡೆದ ಕೆ.ಆರ್.ಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜನಜಾತ್ರೆಯೇ ನೆರೆದಿತ್ತು….

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *