ಬಿಜೆಪಿ ಮುಖಂಡ ಕೊಲೆ ಪ್ರಕರಣ – 10 ಆರೋಪಿಗಳ ಬಂಧನ

ಕಲಬುರ್ಗಿ(ಸೆ. 14): ಜಿಲ್ಲೆಯ ಆಳಂದ ತಾಲೂಕಿನ ಜಿಡಗಾ ಕ್ರಾಸ್ ಬಳಿ ನಡೆದ ಬಿಜೆಪಿ ಮುಖಂಡ ರಾಹುಲ್ ಬೀಳಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 10 ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಹಲವೆಡೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಬೊಲೆರೋ ವಾಹನ, ಒಂದು ಬೈಕ್, ಐದು ಮಾರಕಾಸ್ತ್ರ ಮತ್ತು ಐದು ಮೊಬೈಲ್ ಜಪ್ತಿ ಮಾಡಲಾಗಿದೆ. ಕೊಲೆಗೆ ರಾಜಕೀಯ ದ್ವೇಷವೇ ಕಾರಣ ಎಂದು ತಿಳಿಸಿರುವ ಕಲಬುರ್ಗಿ ಎಸ್.ಪಿ. ಎನ್.ಶಶಿಕುಮಾರ್, ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದಿದ್ದಾರೆ.
ನಗರ ಸಂಸ್ಥೆ ಚುನಾವಣೆ ಮತ ಎಣಿಕೆ ಮುನ್ನ ದಿನವಾದ ಸೆಪ್ಟೆಂಬರ್ 2 ರಂದು ರಾತ್ರಿ ರಾಹುಲ್ ಬೀಳಗಿಯವರನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು. ಬೈಕ್ ಮೇಲೆ ಆಳಂದದ ಕಡೆ ಹೊರಟಿದ್ದ ರಾಹುಲ್ ಮೇಲೆ ಬೊಲೆರೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು. ಕೊಲೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡು, ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.
ಈಗ ಬಂಧಿತ 10 ಮಂದಿಯನ್ನು ಭೂಸನೂರು ಗ್ರಾಮದ ನಾಗರಾಜ ಪಾಟೀಲ, ಸಚಿನ್ ಪಾಟೀಲ, ಅಸ್ಲಾಂ ಪಾಗದ, ಹಸನ್  ಚೋಟಾ ಹಸನ್, ದಾವೂದ್ ಪಾಗದ, ಸಚಿನ್ ಪೊಲೀಸ್ ಪಾಟೀಲ, ಶಂಕರರಾವ್ ಪಾಟೀಲ, ಅಶೋಕ್ ಪಾಟೀಲ, ಗಿರೀಶ್ ಗೊಬ್ಬೂರ ಮತ್ುತ ಸುರೇಶ್ ಯಂಕಂಚಿ ಎಂದು ಗುರುತಿಸಲಾಗಿದೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ರಾಹುಲ್ ಬೀಳಗಿ ಕೊಲೆ ಮಾಡಿರುವುದು ತಿಳಿದುಬಂದಿದೆ.
ಭೂಸನೂರು ಗ್ರಾಮದ ಬಾಬುಗೌಡ ಪಾಟೀಲ ಕುಟುಂಬ ಮತ್ತು ರಾಹುಲ್ ತಂದೆ ಲಕ್ಷ್ಮಣ ಬೀಳಗಿ ನಡುವೆ ರಾಜಕೀಯ ವೈಷಮ್ಯವಿತ್ತು. ಲಕ್ಷ್ಮಣ ಬೀಳಗಿಗೆ ಬಲಗೈಯಂತಿದ್ದ ರಾಹುನ್ ನನ್ನು ಕೊಲೆಗೈದಲ್ಲಿ ಆತನ ಆಟಾಟೋಪಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಕೊಲೆ ನಿರ್ಧಾರ ಮಾಡಲಾಗಿತ್ತು. ಮಹಾರಾಷ್ಟ್ರ ಮೂಲದ ವ್ಯಕ್ತಿಗಳಿಗೆ 5 ಲಕ್ಷ ರೂಪಾಯಿ ಸುಪಾರಿ ನೀಡಿದ್ದರೂ ಕೊಲೆ ನಡೆಯದೇ ಹೋದ ಹಿನ್ನೆಲೆಯಲ್ಲಿ ನಾಗರಾಜ ಪಾಟೀಲ ಮತ್ತವರ ಸಹಚರರು ತಾವೇ ವ್ಯವಸ್ಥಿತಿ ವ್ಯೂಹ ರಚಿಸಿ ಕೊಲೆಗೈದಿದ್ದಾರೆ ಎಂದು ಎಸ್.ಪಿ. ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಬಾಬುಗೌಡ ಪಾಟೀಲ ಸೇರಿ ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ಆರೋಪಿಗಳ ಬಂಧನಕ್ಕ ಜಾಲ ಬೀಸಲಾಗಿದೆ ಎಂದು ಎಸ್.ಪಿ. ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಒಟ್ಟಾರೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ದಲಿತ ಯುವಕ, ಬಿಜೆಪಿ ಮುಖಂಡ ರಾಹುಲ್ ಬೀಳಗಿ ಪ್ರಕರಣದಲ್ಲಿ ಪೊಲೀಸರು ಮೊದಲ ಯಶಸ್ಸು ಕಂಡಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ.

Share News

About Shaikh BIG TV NEWS, Hubballi

Check Also

ರಾಯಚೂರು ಜಿಲ್ಲೆಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ

ರಾಯಚೂರು: ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಜಿಲ್ಲೆ ಈಗ ಪೌಷ್ಟಿಕ ವಿಚಾರದಲ್ಲಿ ಪ್ರಗತಿ ಸಾಧಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ …

Leave a Reply

Your email address will not be published. Required fields are marked *

You cannot copy content of this page