ಬಾಗಲಕೋಟೆ: ಅಡುಗೆ ಎಣ್ಣೆ ಟ್ಯಾಂಕರ್ ಹಾಗೂ ಕಂಟೇನರ್ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಟ್ಯಾಂಕರ್ ಚಾಲಕ ಮೃತಪಟ್ಟಿರುವ ಘಟನೆ ಇಳಕಲ್-ಹುನಗುಂದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.
ಅಪಘಾತದಲ್ಲಿ ಚಾಲಕ ಮೃತಪಟ್ಟಿದ್ದರೂ, ಸಾರ್ವಜನಿಕರು ಮಾನವೀಯತೆ ಮೆರತು ನಡೆದುಕೊಂಡಿದ್ದಾರೆ. ಶವವನ್ನು ಹೊರತೆಗೆಯಲು ಜನರು ಪೊಲೀಸರಿಗೆ ಸಹಾಯ ಮಾಡುವ ಬದಲು ಟ್ಯಾಂಕರ್ನಿಂದ ಸೋರುತ್ತಿದ್ದ ಎಣ್ಣೆ ತುಂಬಿಸಿಕೊಳ್ಳಲು ಪೈಪೋಟಿ ನಡೆಸಿದ್ರು. ಚಾಲಕನ ಮೃತದೇಹ ಹೊರ ತೆಗೆಯಲು ಪೊಲೀಸರು ಹರಸಾಹಸ ಪಡುವಂತಾಯಿತು.
ಎಣ್ಣೆ ತುಂಬಿದ್ದ ಟ್ಯಾಂಕರ್ ಹಿಂಬದಿಯಿಂದ ಕಂಟೇನರ್‌ಗೆ ಗುದ್ದಿದೆ. ಈ ವೇಳೆ ಟ್ಯಾಂಕರ್ನಿಂದ ಅಡುಗೆ ಎಣ್ಣೆ ಸೋರಿಕೆಯಾಗಿದ್ದು, ಚಾಲಕ ಒಳಗಡೆ ಸಿಲುಕಿ ಹಾಕಿಕೊಂಡಿದ್ರು. ಆದ್ರೆ ಆತ ಬದುಕಿದ್ದಾನೋ, ಸತ್ತಿದ್ದಾನೋ ಅಂತಾ ತಿರುಗಿ ನೋಡದ ಜನರು ಅಡುಗೆ ಎಣ್ಣೆಯನ್ನು ಬಿಂದಿಗೆ, ಬಕೆಟ್, ಕ್ಯಾನ್ ಚೊಂಬಿನಲ್ಲಿ ತುಂಬಿಸಿಕೊಳ್ಳುವಲ್ಲಿ ನಿರತರಾಗಿದ್ರು.
ಇನ್ನು ಟ್ಯಾಂಕರ್ನಿಂದ ಬಿದ್ದ ಎಣ್ಣೆ ರಸ್ತೆಯ ತುಂಬಾ ಆವರಿಸಿದ್ದು, ವಾಹನ ಸವಾರರಿಗೆ ಇದರಿಂದ ತೊಂದರೆಯಾಗಿದೆ. ಅದೇ ರಸ್ತೆಯಲ್ಲೇ ಬರುತ್ತಿದ್ದ ಟಾಟಾ ಸುಮೋ, ಚಾಲಕನ ನಿಯಂತ್ರಣ ತಪ್ಪಿ ಜಾಲಿ ಕಂಟಿಯೊಳಗೆ ನುಗ್ಗಿದೆ. ಆದ್ರೆ ವಾಹನದ ಒಳಗಡೆ ಜನ ಇದ್ದರೂ ಅಲ್ಲಿನ ಜನರು ರಕ್ಷಣೆಗೆ ಮುಂದಾಗದೇ, ಎಣ್ಣೆ ತುಂಬಿಸಿಕೊಳ್ಳುವಲ್ಲಿಯೇ ಬ್ಯೂಸಿಯಾಗಿದ್ರು. ಇನ್ನು ರಸ್ತೆಯಲ್ಲಿ ಸಾಕಷ್ಟು ಎಣ್ಣೆ ಬಿದ್ದಿದ್ದರಿಂದ ಏಳು ಬೈಕ್‌ಗಳು ಸ್ಪೀಡ್ ಆಗಿ ಬಂದು, ಹಲವರಿಗೆ ಗಾಯಗಳಾಗಿವೆ. ಸ್ಥಳಕ್ಕೆ ಸಿಪಿಐ, ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದು, ಜನದಟ್ಟಣೆಯನ್ನು ನಿಯಂತ್ರಿಸಿದ್ದಾರೆ. ಇಳಕಲ್ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





